ADVERTISEMENT

ರಾಹುಲ್‌ ಸೂಚನೆ: ಜೋಷಿ ಕ್ಷಮೆಯಾಚನೆ

ಪ್ರಧಾನಿ ಮೋದಿ, ಉಮಾ ಭಾರತಿ ಜಾತಿ ಬಗ್ಗೆ ಕೀಳುಮಟ್ಟದ ಹೇಳಿಕೆ

ಪಿಟಿಐ
Published 23 ನವೆಂಬರ್ 2018, 19:43 IST
Last Updated 23 ನವೆಂಬರ್ 2018, 19:43 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ/ಜೈಪುರ: ‘ಬ್ರಾಹ್ಮಣರು ಮಾತ್ರ ಹಿಂದೂ ಧರ್ಮದ ಬಗ್ಗೆ ಮಾತನಾಡಲು ಅರ್ಹರು‘ ಎಂಬ ರಾಜಸ್ಥಾನ ಕಾಂಗ್ರೆಸ್‌ ನಾಯಕ ಸಿ.ಪಿ. ಜೋಷಿ ಅವರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬ್ರಾಹ್ಮಣರಲ್ಲದ ಮತ್ತು ಕೆಳಜಾತಿಗೆ ಸೇರಿದ ಪ್ರಧಾನಿ ನರೇಂದ್ರ ಮೋದಿ, ಸಚಿವೆ ಉಮಾ ಭಾರತಿ ಮತ್ತು ಸಾಧ್ವಿ ರಿತಂಬರಾ ಅವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು ಹಕ್ಕಿಲ್ಲ ಎಂದು ಜೋಷಿ ಗುರುವಾರ ರಾಜಸ್ಥಾನ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಟೀಕಿಸಿದ್ದರು.

‘ಬಿಜೆಪಿಯ ಈ ಕೆಳವರ್ಗದ ನಾಯಕರಿಗೆ ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ. ಬ್ರಾಹ್ಮಣರು ಮಾತ್ರ ಹಿಂದೂ ಧರ್ಮದ ಮಾತನಾಡಬಲ್ಲರು’ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಜೋಷಿ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್‌ ಗಾಂಧಿ, ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ.

ಜೋಷಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತ ಮತ್ತು ನಿಲುವುಗಳಿಗೆ ವಿರುದ್ಧವಾಗಿದೆ. ಕಾಂಗ್ರೆಸ್‌ ಈ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಸೂಚನೆ ಬೆನ್ನಲ್ಲೇ ಜೋಷಿ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದಾರೆ. ಆದರೆ ಬಿಜೆಪಿ ಮಾತ್ರ, ರಾಹುಲ್‌ ಗಾಂಧಿ ಕ್ಷಮೆಗಾಗಿ ಪಟ್ಟು ಹಿಡಿದಿದೆ.

ಕಾಂಗ್ರೆಸ್‌ ನಾಯಕ ಸಿ.ಪಿ. ಜೋಷಿ ಅವರು ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಕಾವಲುಗಾರರ ಮರ್ಯಾದೆ ಹರಾಜು

ವಿದಿಶಾ/ಮಂಡಿದೀಪ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಚೌಕಿದಾರರ (ಕಾವಲುದಾರರ) ಮಾನ, ಮರ್ಯಾದೆ ಹರಾಜು ಹಾಕಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

‘ಚೌಕಿದಾರ’ ಎಂಬ ಶಬ್ದ ಕೇಳಿದೊಡನೆಯೇ ಜನರು ‘ಚೋರ್‌ ಹೈ’ (ಕಳ್ಳ) ಎಂದು ಕೂಗುತ್ತಾರೆ. ಒಬ್ಬ ಕಳ್ಳ ಚೌಕಿದಾರ ಎಲ್ಲ ದಕ್ಷ ಮತ್ತು ಅಮಾಯಕ ಕಾವಲುಗಾರ ಸಮೂಹಕ್ಕೆ ಕಳಂಕ ತಂದಿಟ್ಟ ಎಂದರು.

ಶುಕ್ರವಾರ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಆದರೆ, ಪ್ರಧಾನಿ ಈ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

***

ಮೋದಿ ಪ್ರಧಾನಿಯಾದರೂ ಬಾಲ್ಯದಲ್ಲಿ ಸುಳ್ಳು ಹೇಳುತ್ತಿದ್ದ ಚಾಳಿಯನ್ನು ಇನ್ನೂ ಬಿಟ್ಟಿಲ್ಲ

–ರಣದೀಪ್‌ ಸುರ್ಜೆವಾಲಾ,ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.