
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ವ್ಯಾಪಾರವನ್ನು ಮುಂದಿಟ್ಟುಕೊಂಡು ಆಪರೇಷನ್ ಸಿಂಧೂರದ ವೇಳೆ ಸಂಘರ್ಷ ಅಂತ್ಯಗೊಳಿಸಲು ನಾನೇ ಮಧ್ಯಸ್ಥಿಕೆ ವಹಿಸಿದ್ದೆ’ ಎಂದಿದ್ದ ಸಂದರ್ಭದಲ್ಲಿ, ‘ನರೇಂದರ್ ಸರೆಂಡರ್ (ನರೇಂದ್ರ ಮೋದಿ ಅವರೆ, ಶರಣಾಗಿ)’ ಎಂದು ನೀಡಿದ್ದ ಹೇಳಿಕೆಯ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ರಾಹುಲ್ ಗಾಂಧಿ ಅವರು ಬುಧವಾರ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.
‘ನರೇಂದ್ರ ಮೋದಿ ಅವರಿಗೆ ನನ್ನ ಬಗ್ಗೆ ಅಷ್ಟೊಂದು ಸಂತೋಷವಿಲ್ಲ. ಯಾಕೆಂದರೆ, ರಷ್ಯಾದಿಂದ ತೈಲ ಖರೀದಿಸುವುದಕ್ಕೆ ನಾವು ಸುಂಕ ಹೇರಿದ್ದೇವಲ್ಲ. ಅವರು ನನ್ನನ್ನು ನೋಡಲು ಬಂದಿದ್ದರು. ‘ಸರ್ ದಯಮಾಡಿ ನಿಮ್ಮನ್ನು ಭೇಟಿಯಾಗಬಹುದೇ? ಎಂದು ಕೇಳಿಕೊಂಡಿದ್ದರು. ನಾನು ಒಕೆ ಎಂದು ಹೇಳಿದ್ದೆ’ ಎಂದು ಟ್ರಂಪ್ ಅವರು ಮಂಗಳವಾರ ಹೇಳಿದ್ದರು.
ಈ ಹೇಳಿಕೆ ಕುರಿತು ಪೋಸ್ಟ್ ಹಂಚಿಕೊಂಡಿರುವ ರಾಹುಲ್, ‘ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ ಸರ್’ ಎಂದು ಬರೆದುಕೊಂಡಿದ್ದಾರೆ. ಅಮೆರಿಕದ ಒತ್ತಡಕ್ಕೆ ಮಣಿಯದೆ ಇಂದಿರಾ ಗಾಂಧಿ ಅವರು 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹೇಗೆ ಕಾರ್ಯನಿರ್ವಹಿಸಿದರು ಎಂಬ ಬಗ್ಗೆ ಆಡಿದ ಮಾತುಗಳೂ ವಿಡಿಯೊದಲ್ಲಿ ಇವೆ.