ADVERTISEMENT

ರಾಹುಲ್‌ ದೇಶದ ದಾರಿ ತಪ್ಪಿಸುತ್ತಿದ್ದಾರೆ: ಬಿಜೆಪಿ

ಪಿಟಿಐ
Published 27 ಮೇ 2020, 19:45 IST
Last Updated 27 ಮೇ 2020, 19:45 IST
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್   

ನವದೆಹಲಿ: ‘ಕೋವಿಡ್‌–19 ವಿರುದ್ಧ ಹೋರಾಡಲು ದೇಶದ ದೃಢನಿಶ್ಚಯವನ್ನೇ ದುರ್ಬಲಗೊಳಿಸಲು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಯತ್ನಿಸುತ್ತಿದ್ದಾರೆ‘ ಎಂದು ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.

‘ಕಾಂಗ್ರೆಸ್‌ನ ಮುಖ್ಯಮಂತ್ರಿಗಳು ರಾಹುಲ್‌ ಮಾತುಗಳನ್ನು ಕೇಳುತ್ತಾರಷ್ಟೆ. ಆದರೆ, ಲಾಕ್‌ಡೌನ್‌ ಸಡಿಲಗೊಳಿಸಬೇಕು, ಬಡವರಿಗೆ ನಗದು ನೀಡುವ ಪ್ಯಾಕೇಜ್‌ ಘೋಷಿಸಬೇಕು ಎಂಬ ಅವರ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾರರು‘ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಹೇಳಿದರು.

‘ರಾಹುಲ್ ವರ್ತನೆ ಬೇಜವಾಬ್ದಾರಿಯಿಂದ ಕೂಡಿದೆ. ಸುಳ್ಳು ಮಾಹಿತಿ ಹಾಗೂ ವಾಸ್ತವಾಂಶಗಳನ್ನು ತಿರುಚುವ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ‘ ಎಂದೂ ಟೀಕಿಸಿದರು.

ADVERTISEMENT

‘ಕೋವಿಡ್‌–19 ವಿರುದ್ಧ ಭಾರತ ಕೈಗೊಂಡಿರುವ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವವರು ಯಾರು?‘ ಎಂಬ ಪುಸ್ತಕವನ್ನೂ ಬಿಜೆಪಿ ಬಿಡುಗಡೆ ಮಾಡಿದ್ದು, ರಾಹುಲ್‌ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ರಾಹುಲ್‌ ಅವರು ಈವರೆಗೆ ಮಾಡಿರುವ ಆರೋಪಗಳು, ಕೊರೊನಾ ವೈರಸ್‌ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿ ಪ್ರಕಟಗೊಂಡಿರುವ ವರದಿಗಳನ್ನು ಈ ಪುಸ್ತಕ ಒಳಗೊಂಡಿದೆ.

’137 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮೇ 26ರವರೆಗೆ 4,345 ಜನರು ಮೃತಪಟ್ಟಿದ್ದಾರೆ. ಅದೇ, ಕೋವಿಡ್‌–19 ವ್ಯಾಪಕವಾಗಿರುವ 15 ದೇಶಗಳಲ್ಲಿ ಇದೇ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 3,43,562. ಚೀನಾದಲ್ಲಿ ಸಂಭವಿಸಿರುವ ಸಾವಿನ ಬಗ್ಗೆಯೇ ಹಲವಾರು ಪ್ರಶ್ನೆಗಳು ಉದ್ಭವಿಸಿರುವ ಕಾರಣ, ಅಲ್ಲಿನ ಅಂಕಿ–ಸಂಖ್ಯೆಗಳನ್ನು ಪರಿಗಣಿಸಿಲ್ಲ‘ ಎಂದರು.

‘ಮಹಾರಾಷ್ಟ್ರದಲ್ಲಿರುವ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿಲ್ಲ. ಮಿತ್ರ ಪಕ್ಷಗಳಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿಯೇ ಸರ್ಕಾರ ಬೀಳಲಿದೆ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.