ADVERTISEMENT

ವರಮಾನ ಹೆಚ್ಚಿಸಲು ‘ಪಾರ್ಸೆಲ್ ರೈಲು’

ವ್ಯಾಪಾರ ಅಭಿವೃದ್ಧಿ ಘಟಕ ಸ್ಥಾಪನೆಗೆ ಮುಂದಾದ ಇಲಾಖೆ; ವಲಯ, ವಿಭಾಗೀಯ ಮಟ್ಟದಲ್ಲಿ ರಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:19 IST
Last Updated 5 ಜುಲೈ 2020, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಮುಂದಾಗಿರುವ ರೈಲ್ವೆ ಇಲಾಖೆಯು ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿಡಿಯು) ಸ್ಥಾಪಿಸಲು ಚಿಂತಿಸುತ್ತಿದೆ. ವಲಯ ಹಾಗೂ ವಿಭಾಗೀಯ ಕಚೇರಿಗಳಲ್ಲಿ ಪ್ರತ್ಯೇಕ ಘಟಕಗಳನ್ನು ತೆರೆದು, ಸರಕು ಸಾಗಣೆ ಮೂಲಕ ವರಮಾನ ಹೆಚ್ಚಿಸಿಕೊಳ್ಳಲು ಇಚ್ಛಿಸಿದೆ.

‘ಪಾರ್ಸೆಲ್ ರೈಲು’ಗಳ ಮೂಲಕ ಸರಕು ಸಾಗಣೆ ಪ್ರಮಾಣ ದುಪ್ಪಟ್ಟುಗೊಳಿಸಬೇಕು ಎಂದು ರೈಲ್ವೆ ಇಲಾಖೆಯು ವಲಯ ಕಚೇರಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಣ್ಣ ಪಾರ್ಸೆಲ್‌ಗಳ ಸಾಗಾಟ ಹಾಗೂ ಸರಕು ಸಾಗಾಟದ ಮೂಲಕ ಸಾಗಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

ಸಾಗಣೆ ಹೆಚ್ಚಿಸಲು ಅನುಕೂಲವಾಗುವಂತೆ ವಿಭಾಗೀಯ ಹಾಗೂ ವಲಯ ಕಚೇರಿಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸುವಂತೆ ರೈಲ್ವೆ ಮಂಡಳಿಯು ಸಲಹೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ‘ಬಿಡಿಯು’ ಸ್ಥಾಪನೆಗೆ ರೈಲ್ವೆ ಹೆಚ್ಚು ಒಲವು ತೋರುತ್ತಿದೆ.

ADVERTISEMENT

ರಸ್ತೆ ಮೂಲಕ ಸಾಗಿಸಲಾಗುವ ಸರಕುಗಳನ್ನು ರೈಲ್ವೆ ಕಡೆಗೆ ಆಕರ್ಷಿಸಲು ಇಲಾಖೆ ಮುಂದಾಗಿದ್ದು, ನಿತ್ಯದ ಮಾರ್ಗದಲ್ಲಿ ದಿನವೂ ನಿಗದಿತ ವೇಳಾಪಟ್ಟಿಯಲ್ಲಿ ಸರಕು ಸಾಗಣೆ ರೈಲು ಓಡಿಸಲು ಯೋಜನೆ ರೂಪಿಸಲಾಗುತ್ತಿದೆ.

ಪ್ರಸ್ತುತ, ಪ್ರಯಾಣಿಕ ರೈಲುಗಳಲ್ಲಿ ಒಂದೆರಡು ಸರಕು ತುಂಬಿದ ಬೋಗಿಗಳನ್ನು ಜೋಡಿಸಲಾಗುತ್ತದೆ. ಈ ಸಂಪ್ರದಾಯ ಕೊನೆಯಾಗಲಿದ್ದು, ಪ್ರತ್ಯೇಕ ಹಾಗೂ ಕಾಯಂ ಆಗಿ ಸರಕು ಸಾಗಿಸುವ ‘ಪಾರ್ಸೆಲ್ ರೈಲು’ ನಿಗದಿತ ಮಾರ್ಗದಲ್ಲಿ ಇನ್ನುಮುಂದೆ ಓಡಲಿದೆ. ಈ ಪಾರ್ಸೆಲ್ ರೈಲುಗಳು ಸರಕು ಸಾಗಣೆ ರೈಲುಗಳಿಗಿಂತ ಭಿನ್ನವಾಗಿರಲಿವೆ. ಸರಕನ್ನು ಇಳಿಸುವ ಪ್ರಮೇಯ ಇಲ್ಲದಿದ್ದರೆ, ಈಗಿನ ಸರಕು ಸಾಗಣೆ ರೈಲುಗಳು ಯಾವ ನಿಲ್ದಾಣದಲ್ಲೂ ನಿಲುಗಡೆ ಮಾಡದೆ ಗಮ್ಯ ತಲುಪುತ್ತವೆ. ಇವುಗಳಿಗೆ ಖಚಿತ ವೇಳಾಪಟ್ಟಿಯೂ ಇರುವುದಿಲ್ಲ.

ಲಾಕ್‌ಡೌನ್‌ ಸಮಯದಲ್ಲಿ ಈ ಪಾರ್ಸೆಲ್ ರೈಲುಗಳು ದೇಶದ ಜೀವನಾಡಿಯಂತೆ ಕೆಲಸ ಮಾಡಿದ್ದವು. ಸುಮಾರು 500ಕ್ಕೂ ಹೆಚ್ಚು ಪಾರ್ಸೆಲ್ ರೈಲುಗಳಲ್ಲಿ ಔಷಧ, ತರಕಾರಿ, ಹಣ್ಣು, ಹಾಲು, ಹೈನು ಉತ್ಪನ್ನಗಳು, ಬಿತ್ತನೆ ಬೀಜಗಳನ್ನು ಸಾಗಿಸಲಾಗಿತ್ತು.

ಸರಕುಗಳನ್ನು ಆಕರ್ಷಿಸಲು ಸ್ಥಳೀಯ ವರ್ತಕ ಸಂಘಗಳು ಹಾಗೂ ವ್ಯಾಪಾರಿ ಸಂಸ್ಥೆಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

****

ರೈಲ್ವೆ ಶೇ 60–70ರಷ್ಟು ಆದಾಯ ತಂದುಕೊಡುವ ಸರಕು ಸಾಗಣೆ ರೈಲುಗಳು

ಇತರೆ ಮಾಧ್ಯಮಗಳಿಗೆ ಹೋಲಿಸಿದರೆ ರೈಲ್ವೆಯಲ್ಲಿ ಸರಕು ಸಾಗಣೆ ವೆಚ್ಚ ಕಡಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.