ADVERTISEMENT

ರೈಲು ಪರಿಚಾರಕರಿಗೆ ಕಾವಿ ಸಮವಸ್ತ್ರ: ಸಂತರ ಆಕ್ಷೇಪದ ಬೆನ್ನಲ್ಲೇ ನಿರ್ಧಾರ ವಾಪಸ್

ಪಿಟಿಐ
Published 23 ನವೆಂಬರ್ 2021, 4:38 IST
Last Updated 23 ನವೆಂಬರ್ 2021, 4:38 IST
ಬದಲಾಯಿಸಲಾದ ಹೊಸ ಸಮವಸ್ತ್ರದೊಂದಿಗೆ ರೈಲು ಪರಿಚಾರಕರು – ಪಿಟಿಐ ಚಿತ್ರ
ಬದಲಾಯಿಸಲಾದ ಹೊಸ ಸಮವಸ್ತ್ರದೊಂದಿಗೆ ರೈಲು ಪರಿಚಾರಕರು – ಪಿಟಿಐ ಚಿತ್ರ   

ಉಜ್ಜಯಿನಿ:‘ರಾಮಾಯಣ ಎಕ್ಸ್‌ಪ್ರೆಸ್‌’ ರೈಲಿನ ಪರಿಚಾರಕರ ಕಾವಿ ಬಣ್ಣದ ಸಮವಸ್ತ್ರಕ್ಕೆ ಉಜ್ಜಯಿನಿಯ ಸಂತರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ರೈಲ್ವೆ ಇಲಾಖೆಯು ಆ ನಿರ್ಧಾರವನ್ನು ವಾಪಸ್ ಪಡೆದಿದೆ. ಪರಿಚಾರಕರ ಸಮವಸ್ತ್ರವನ್ನು ಬದಲಾಯಿಸಲಾಗಿದೆ.

‘ರೈಲಿನ ಪರಿಚಾರಕರು ವೃತ್ತಿಪರರಾಗಿ ಕಾಣುವಂತೆ ಸಮವಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ’ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಪರಿಚಾರಕರು ಕಾವಿ ಸಮವಸ್ತ್ರ ಧರಿಸುವಂತೆ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂದು ಸಂತರು ಆರೋಪಿಸಿದ್ದರು. ಅಲ್ಲದೆ, ಸಮವಸ್ತ್ರವನ್ನು ಹಿಂಪಡೆಯದಿದ್ದರೆ ಡಿಸೆಂಬರ್‌ 12ರಂದು ದೆಹಲಿಯಲ್ಲಿ ರೈಲು ತಡೆ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದರು.

‘ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಪರಿಚಾರಕರು ಕಾವಿ ಸಮವಸ್ತ್ರ ಧರಿಸಿರುವ ಬಗ್ಗೆ ಎರಡು ದಿನಗಳ ಹಿಂದೆ ರೈಲ್ವೆ ಸಚಿವರಿಗೆ ಪತ್ರ ಬರೆದು ನಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದೆವು. ಸಾಧುಗಳು ಧರಿಸುವಂತಹ ಕಾವಿ ಬಣ್ಣದ ಬಟ್ಟೆ ಹಾಗೂ ರುದ್ರಾಕ್ಷಿ ಮಾಲೆಯನ್ನು ರೈಲಿನ ಪರಿಚಾರಕರು ಧರಿಸುವುದು ಸಾಧುಗಳಿಗೆ ಮತ್ತು ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತೆ’ ಎಂದು ಉಜ್ಜಯಿನಿಯ ಅಖಾಡ ಪರಿಷತ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ್‌ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.