ADVERTISEMENT

ಕೇರಳದಲ್ಲಿ ಮತ್ತೆ ಮಳೆ: 8 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:53 IST
Last Updated 21 ಅಕ್ಟೋಬರ್ 2021, 19:53 IST
ಅಮಿತ್‌ ಶಾ ಅವರು ಉತ್ತರಾಖಂಡದಲ್ಲಿ ಗುರುವಾರ ವೈಮಾನಿಕ ಸಮೀಕ್ಷೆ ನಡೆಸಿದರು ಪಿಟಿಐ ಚಿತ್ರ
ಅಮಿತ್‌ ಶಾ ಅವರು ಉತ್ತರಾಖಂಡದಲ್ಲಿ ಗುರುವಾರ ವೈಮಾನಿಕ ಸಮೀಕ್ಷೆ ನಡೆಸಿದರು ಪಿಟಿಐ ಚಿತ್ರ   

ತಿರುವನಂತಪುರ/ಡೆಹ್ರಾಡೂನ್‌ (ಪಿಟಿಐ): ಅಲ್ಪ ವಿರಾಮದ ಬಳಿಕ ಕೇರಳದಲ್ಲಿ ಗುರುವಾರ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಪತ್ತನಂತಿಟ್ಟ, ಕೋಟಯಂ, ಇಡುಕ್ಕಿ, ಪಾಲಕ್ಕಾಡ್‌, ಮಲಪ‍್ಪುರ, ಕೋಯಿಕ್ಕೋಡ್‌, ವಯನಾಡ್‌ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ತ್ರಿಶ್ಶೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಆರೆಂಜ್‌ ಅಲರ್ಟ್ ಎಂದರೆ ಭಾರಿ ಮಳೆ ಮತ್ತು ಯೆಲ್ಲೋ ಅಲರ್ಟ್‌ ಎಂದರೆ ಅಲ್ಲಲ್ಲಿ ಸಾಮಾನ್ಯ ಮಳೆ.

ಕೇರಳದ ಹಲವು ಭಾಗಗಳಲ್ಲಿ ಮತ್ತು ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಸಮುದ್ರದಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮೀನು
ಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ಇದೇ 15ರಿಂದ ರಾಜ್ಯದಲ್ಲಿ ಮಳೆ ಆರಂಭವಾಗಿದೆ. ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು ಅನಾಹುತಕ್ಕೆ ಕಾರಣವಾಗಿದೆ. ಮಳೆ ಸಂಬಂಧಿ ಅವಘಡಗಳಿಂದ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ.

ಶಾ ಸಮೀಕ್ಷೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಭಾರಿ ಮಳೆಯಿಂದ ತೀವ್ರ ತೊಂದರೆಗೆ ಒಳಗಾಗಿರುವ ಉತ್ತರಾಖಂಡ ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಕುಮಾವೊನ್‌ ಪ್ರಾಂತ್ಯದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಶಾ ಅವರು ಜಾಲಿಗ್ರಾಂಟ್‌ ವಿಮಾನ ನಿಲ್ಧಾಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಎಚ್ಚರದಲ್ಲಿ ಇದ್ದ ಕಾರಣ ಹಾನಿಯನ್ನು ತಡೆಯಲು ಸಾಧ್ಯವಾಗಿದೆ ಎಂದರು.

ಅತೀ ಹೆಚ್ಚು ಹಾನಿಗೆ ಒಳಗಾಗಿರುವ ಕುಮಾವೊನ್‌ ಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಗುರುವಾರವೂ ನಡೆದಿದೆ. ಹೆಚ್ಚು ಅಪಾಯದ ಸ್ಥಳಗಳಿಂದ ಜನರ ತೆರವು ಮತ್ತು ಸಂಪ‍ರ್ಕ ವ್ಯವಸ್ಥೆ ಮರು ಸ್ಥಾಪನೆ ಪ್ರಯತ್ನಗಳು ಮುಂದುವರಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.