ADVERTISEMENT

ಭಾರಿ ಮಳೆ: ದೇಶದಾದ್ಯಂತ ಒಟ್ಟು 24 ಮಂದಿ ಸಾವು

ಪಿಟಿಐ
Published 1 ಆಗಸ್ಟ್ 2024, 14:08 IST
Last Updated 1 ಆಗಸ್ಟ್ 2024, 14:08 IST
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕುಲ್ಲಿ ಜಿಲ್ಲೆಯಲ್ಲಿ ಹರಿಯುವ ಬಿಯಾಸಿ ನದಿಯಲ್ಲಿ ಪ್ರವಾಹ ಉಂಟಾಗಿದೆ –ಪಿಟಿಐ ಚಿತ್ರ
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕುಲ್ಲಿ ಜಿಲ್ಲೆಯಲ್ಲಿ ಹರಿಯುವ ಬಿಯಾಸಿ ನದಿಯಲ್ಲಿ ಪ್ರವಾಹ ಉಂಟಾಗಿದೆ –ಪಿಟಿಐ ಚಿತ್ರ   

ಡೆಹ್ರಾಡೂನ್‌/ಶಿಮ್ಲಾ/ನವದೆಹಲಿ: ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಅವಘಡಗಳಲ್ಲಿ ಒಟ್ಟು 24 ಮಂದಿ ಗುರುವಾರ ಮೃತಪಟ್ಟಿದ್ದಾರೆ.

ಉತ್ತರಾಖಂಡದ ಹಲವು ಭಾಗಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಈವರೆಗೆ ಒಮ್ಮೆಯೂ ಮಳೆ ಸುರಿದಿರಲಿಲ್ಲ. ಆದರೆ, ಬುಧವಾರ ರಾತ್ರಿ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಇಲ್ಲಿನ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಪ್ರವಾಹ ಉಂಟಾಗಿದ್ದು ಕೆಲವೆಡೆ ಮೇಘಸ್ಫೋಟವೂ ಸಂಭವಿಸಿದೆ.

ಈ ಘಟನೆಗಳಲ್ಲಿ ಒಂದೇ ಕುಟುಂಬದ ಮೂವರು ಸೇರಿ ಒಟ್ಟು 12 ಮಂದಿ ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಹಲವೆಡೆ ಮನೆಗಳು ಕುಸಿದಿವೆ. ಹರಿದ್ವಾರ, ಡೆಹ್ರಾಡೂನ್‌, ಠಹರಿ ಹಾಗೂ ಚಮೋಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಡೆಹ್ರಾಡೂನ್‌ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದೆ. ಮಳೆನೀರು ಮನೆಗೆ ನುಗ್ಗಿದೆ.

ADVERTISEMENT

ಹಿಮಾಚಲ ಪ್ರದೇಶದಲ್ಲಿನ ಮೇಘಸ್ಫೋಟ ಹಾಗೂ ಪ್ರವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದೆ. ನದಿಗಳ ನೀರಿನ ಮಟ್ಟ ಅಪಾಯಕರ ರೀತಿಯಲ್ಲಿ ಏರಿಕೆಯಾಗಿದೆ. ಇಲ್ಲಿನ ಕುಲ್ಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಮೇಘಸ್ಫೋಟ ಸಂಭವಿಸಿದೆ. ಈ ಘಟನೆಗಳಲ್ಲಿ ಐವರು ಮೃತಪಟ್ಟಿದ್ದು, ಸುಮಾರು 50 ಜನರು ಕಾಣೆಯಾಗಿದ್ದಾರೆ. ಹಲವು ಮನೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಈ ಜಿಲ್ಲೆಗಳಲ್ಲಿನ ರಸ್ತೆ ಸಂಪರ್ಕವು ಕಡಿತಗೊಂಡಿದೆ.

‘ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ’ ಎಂದು ಶಿಮ್ಲಾದ ಜಿಲ್ಲಾಧಿಕಾರಿ ಅನುಪಮ್‌ ಕಶ್ಯಪ್‌ ತಿಳಿಸಿದರು. ‘ಮುಂದಿನ ನಾಲ್ಕು–ಐದು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ. ಮಂಡಿ, ಕುಲ್ಲು, ಚಂಬಾ ಹಾಗೂ ಕಾಂಗಢಾ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ’ ಎಂದು ಹವಾಮಾನತಜ್ಞ ಸಂದೀಪ್‌ ಶರ್ಮಾ ಹೇಳಿದ್ದಾರೆ.

ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದು ಬಿದ್ದು, 62 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿಫೆನ್ಸ್‌ ಕಾಲೊನಿಯಲ್ಲಿ ಒಬ್ಬರು, ಶಾಸ್ತ್ರಿ ಪಾರ್ಕ್‌ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಟ್ಟಡ ಕುಸಿತದಿಂದ ಹಲವರು ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ತೀವ್ರ ಮಳೆಯಾಗುತ್ತಿರುವ ಕಾರಣ ನಗರದ ಹ್ಯಾಪಿ ಶಾಲೆಯ ಗೋಡೆ ಕುಸಿದಿದೆ. ಇದರಿಂದಾಗಿ ಶಾಲೆಯ ಮುಂದೆ ನಿಲ್ಲಿಸಿದ್ದ ಕಾರುಗಳು ಜಖಂಗೊಂಡಿವೆ –ಪಿಟಿಐ ಚಿತ್ರ

‘ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ದೆಹಲಿಯಾದ್ಯಂತ ಸಂಚಾರ ದಟ್ಟಣೆ ಉಂಟಾಗಿತ್ತು. ರಾತ್ರಿ 7ರವರೆಗೆ ಸಂಚಾರ ದಟ್ಟಣೆಗೆ ಸಂಬಂಧಿಸಿದ ಒಟ್ಟು 2,945, ನೀರು ನುಗ್ಗಿದ ಘಟನೆಗೆ ಸಂಬಂಧಿಸಿ 127, ಕಟ್ಟಡ ಕುಸಿದು ಬಿದ್ದಿರುವ ಕುರಿತು 27 ಮತ್ತು ಮರ ಬಿದ್ದಿರುವ ಕುರಿತು 50 ಕರೆಗಳು ಬಂದಿವೆ’ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದರು.

ಕೇದಾರನಾಥಕ್ಕೆ ತೆರಳುವ ಮಾರ್ಗ ಮಧ್ಯದ ಭೀಮ್‌ಬಲಿ ಚೌಕಿ ಬಳಿ ಬೆಟ್ಟ ಕುಸಿದಿದೆ. ಎನ್‌ಡಿಆರ್‌ಎಫ್‌ ಸಿಬ್ಬಂದಿ ಗುರುವಾರ ರಕ್ಷಣಾ ಕಾರ್ಯಾಚರಣೆ ನಡೆಸಿದರು –ಪಿಟಿಐ ಚಿತ್ರ
ಮಾರ್ಗಮಧ್ಯೆ ಸಿಲುಕಿದ 450 ಕೇದಾರನಾಥ ಯಾತ್ರಿಗಳು
ಗೌರಿಕುಂಡ–ಕೇದಾರನಾಥ ಚಾರಣ ಮಾರ್ಗದಲ್ಲಿ ಸುಮಾರು 450 ಯಾತ್ರಿಗಳು ಸಿಲುಕಿಕೊಂಡಿದ್ದಾರೆ. ಈ ಮಾರ್ಗದ ಸುಮಾರು 20–25 ಮೀಟರ್‌ ಉದ್ದದ ರಸ್ತೆ ಮಾರ್ಗವು ಭೂಕುಸಿತದಿಂದ ಹಾನಿಗೊಳಗಾಗಿದೆ. ಸಂಚಾರ ರದ್ದುಗೊಂಡಿದೆ. ಕೇದಾರನಾಥ ಮಾರ್ಗದಲ್ಲಿನ ಭೀಮ್‌ಬಲಿ ಚೌಕಿ ಬಳಿ ಸುಮಾರು 200 ಯಾತ್ರಿಗಳು ಸಿಲುಕಿಕೊಂಡಿದ್ದರು. ಇವರನ್ನು ರಕ್ಷಿಸಲಾಗಿದ್ದು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈ ಮಾರ್ಗದಲ್ಲಿ ರಸ್ತೆಗಳ ಮೇಲೆ ಬಂಡೆಗಳು ಉರುಳುತ್ತಿವೆ. ‘ಹವಾಮಾನವು ಸಹಜ ಸ್ಥಿತಿಗೆ ಬರುವವರೆಗೆ ಕೇದಾರನಾಥ ಯಾತ್ರಿಗಳು ಸುರಕ್ಷಿತ ಪ್ರದೇಶದಲ್ಲಿಯೇ ಇರಬೇಕು. ಕೇದಾರನಾಥ ಮಾರ್ಗದ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗುವವರೆಗೂ ಯಾವ ಯಾತ್ರಿಗಳೂ ಯಾತ್ರೆ ಹೊರಡಬಾರದು’ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ದೆಹಲಿಯ ಹಳೆಯ ರಾಜಿಂದರ್‌ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ವೊಂದಕ್ಕೆ ಮಳೆ ನೀರು ನುಗ್ಗಿ ಇತ್ತೀಚೆಗಷ್ಟೇ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟಿದ್ದರು. ಇದೇ ನಗರದಲ್ಲಿ ಬುಧವಾರವೂ ಹೆಚ್ಚು ಮಳೆಯಾಗಿದ್ದು ನೆಲಮಹಡಿಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಸೊಂಟದ ಮಟ್ಟದವರೆಗೆ ನೀರು ನಿಂತಿದೆ. ರಸ್ತೆಯಲ್ಲಿಯೇ ಐಎಎಸ್‌ ಆಕಾಂಕ್ಷಿಗಳು ಬುಧವಾರ ರಾತ್ರಿ ಪ್ರತಿಭಟನೆ ಮುಂದುವರಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೈಪುರದ ವಿಶ್ವಕರ್ಮ ನಗರದ ಮನೆಯೊಂದಕ್ಕೆ ನೀರು ನುಗ್ಗಿ ಅಪ್ರಾಪ್ತೆ ಸೇರಿ ಕುಟುಂಬದ ಮೂವರು ಮಳೆನೀರಿನಲ್ಲಿ ಮುಳುಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.