ADVERTISEMENT

ಟೈಲರ್ ಹತ್ಯೆ ಆರೋಪಿಗಳೊಂದಿಗಿನ ನಂಟಿನ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಲಿ: ಗೆಹಲೋತ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 2:36 IST
Last Updated 12 ಜುಲೈ 2022, 2:36 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್   

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಅಖ್ತಾರಿ ಜೊತೆ ಬಿಜೆಪಿಗೆ ಸಂಬಂಧವಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಗಂಭೀರ ಆರೋಪ ಮಾಡಿದ್ದಾರೆ. ಹಾಗೆಯೇ, ಆ ಪಕ್ಷವು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಆಗ್ರಹಿಸಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಆದಾಗ್ಯೂ, ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿಟೈಲರ್ ಕನ್ಹಯ್ಯ ಲಾಲ್‌ ಅವರನ್ನು ಅವರ ಅಂಗಡಿಯಲ್ಲೇ ಆರೋಪಿಗಳಾದ ರಿಯಾಜ್‌ ಅನ್ಸಾರಿ ಮತ್ತು ಗೌಸ್‌ ಮಹಮ್ಮದ್‌ ಹತ್ಯೆ ಮಾಡಿದ್ದರು.

ರಿಯಾಜ್ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೇರಿದಂತೆ ಹಲವರು ವಾಗ್ದಾಳಿ ನಡೆಸಿದ್ದರು.

ADVERTISEMENT

ಇದೇ ವಿಚಾರವಾಗಿ ಬಿಜೆಪಿಯನ್ನು ಕೆಣಕಿರುವ ಗೆಹಲೋತ್, ಈ ಪ್ರಕರಣದ (ಉದಯಪುರ ಹತ್ಯೆ) ಆರೋಪಿಗಳೊಂದಿಗೆ ಬಿಜೆಪಿ ಸಂಬಂಧ ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆರೋಪಿಗಳು ಮುಸ್ಲಿಂ ವ್ಯಕ್ತಿಯೇ ಮಾಲೀಕರಾಗಿರುವ ಮನೆಯಲ್ಲಿ ವಾಸಿಸುತ್ತಿದ್ದರು ಎಂದಿದ್ದಾರೆ.

ಆರೋಪಿಗಳು ಮನೆ ಬಾಡಿಗೆ ಪಾವತಿಸುತ್ತಿರಲಿಲ್ಲ. ಈ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.ಬಾಡಿಗೆಗೆ ಇದ್ದವರಲ್ಲಿ ಒಬ್ಬ ಪಕ್ಷದ ಕಾರ್ಯಕರ್ತನಾಗಿದ್ದರಿಂದ, ಆತನ ವಿರುದ್ಧದ ದೂರನ್ನು ಕೈಬಿಡುವಂತೆ ಬಿಜೆಪಿಯು ಪೊಲೀಸರಿಗೆ ಮನವಿ ಮಾಡಿದೆ. ಆ ಮೂಲಕ ಆರೋಪಿಗೆ ನೆರವು ನೀಡಿದೆ ಎಂಬ ಆರೋಪಗಳ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಕೇಳಿದ್ದಾರೆ.

'ಹತ್ಯೆ ಆರೋಪಿಗಳು ತಾವು ವಾಸಿಸುತ್ತಿದ್ದ ಮನೆಗೆ ಬಾಡಿಗೆ ಪಾವತಿಸುತ್ತಿರಲಿಲ್ಲ. ಈ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸುವ ಮೊದಲೇ, ಮಾಲೀಕರನ್ನು ಕರೆಸಿಕೊಂಡಿದ್ದ ಬಿಜೆಪಿಯವರು, ಅವರು (ಆರೋಪಿಗಳು) ಬಿಜೆಪಿ ಕಾರ್ಯಕರ್ತರು. ಅವರಿಗೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದರು' ಎಂದು ಗೆಹಲೋತ್ ಹೇಳಿದ್ದಾರೆ.

ಆದರೆ, ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ.

ಜೂನ್‌ 28ರಂದು ನಡೆದ ಟೈಲರ್ಹತ್ಯೆ ಪ್ರಕರಣದ ತನಿಖೆಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.