ಜೈಪುರ: ರಾಜಸ್ಥಾನದ ಹಿರಿಯ ರಾಜಕಾರಣಿ ಘನಶ್ಯಾಂ ತಿವಾರಿ ಶನಿವಾರ ಮರಳಿ ಬಿಜೆಪಿ ಸೇರಿದ್ದಾರೆ. ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರ ನಡುವಣ ಭಿನ್ನಾಭಿಪ್ರಾಯದಿಂದಾಗಿ ಅವರು ಎರಡು ವರ್ಷಗಳ ಹಿಂದೆ ಪಕ್ಷ ತೊರೆದಿದ್ದರು.
ಪಕ್ಷವು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಹಾಜರಿಯಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
‘ಸುದೀರ್ಘ ಸಮಯದ ನಂತರ ಈ ವೇದಿಕೆಯಲ್ಲಿ ಮಾತನಾಡಲು ಅವಕಾಶ ಪಡೆದಿದ್ದೇನೆ. ಪಕ್ಷಕ್ಕೆ ಸೇರುವುದಾಗಿ ನಾನು ಬರೆದ ಪತ್ರವನ್ನು ಪರಿಗಣಿಸಿದ ಪಕ್ಷದ ನಾಯಕತ್ವಕ್ಕೆ ಧನ್ಯವಾದಗಳು’ ಎಂದು ತಿವಾರಿ ಹೇಳಿದ್ದಾರೆ.
ಕಾಂಗ್ರೆಸ್‌ನೊಂದಿಗೆ ಹಿಂದೊಮ್ಮೆ ವೇದಿಕೆ ಹಂಚಿಕೊಂಡಿದ್ದರೂ ಅದರ ಸದಸ್ಯತ್ವ ಸ್ವೀಕರಿಸಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಹೃತ್ಪೂರ್ವಕವಾಗಿ ಬಿಜೆಪಿಯಲ್ಲಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಬೇರೆ ಪಕ್ಷ ರಚಿಸಿದ್ದೆ ಎಂದೂ ಅವರು ಹೇಳಿದ್ದಾರೆ.
2018ರಲ್ಲಿ ಬಿಜೆಪಿ ತ್ಯಜಿಸುವ ಮುನ್ನ ಆಗಿನ ವಸುಂಧರಾ ರಾಜೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತಿವಾರಿ ಭಿನ್ನಾಭಿಪ್ರಾಯ ಹೊಂದಿದ್ದರು. ಬಳಿಕ ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಭಾರತ್ ವಾಹಿನಿ ಪಕ್ಷ’ ಸ್ಥಾಪಿಸಿದ್ದರು. ಸಂಗಾನೆರ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.