ಜೈಪುರ: ಪಾಕಿಸ್ತಾನದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದಡಿ ರಾಜಸ್ಥಾನದ ಸರ್ಕಾರಿ ನೌಕರರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜೈಸಲ್ಮೇರ್‌ನ ಜಿಲ್ಲಾ ಉದ್ಯೋಗ ಕಚೇರಿಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಕೂರ್ ಖಾನ್ ಅವರು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
‘ಶಕೂರ್ ಮೇಲೆ ಹಲವು ದಿನಗಳಿಂದ ನಿಗಾ ಇರಿಸಲಾಗಿತ್ತು. ಪಾಕಿಸ್ತಾನದ ಹೈಕಮಿಷನ್ ಅದರಲ್ಲೂ ಮುಖ್ಯವಾಗಿ ಹಾಸನ್–ಉರ್–ರಹೀಮ್ ಅಲಿಯಾಸ್ ಡ್ಯಾನಿಶ್ ಮತ್ತು ಸೋಹೈಲ್ ಕ್ವಾಮರ್ ಅವರ ಜೊತೆ ಶಕೂರ್ ನಿರಂತರವಾಗಿ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಹಲವು ದಿನಗಳ ಹಿಂದೆ ಶಕೂರ್ ಅವರನ್ನು ವಶಕ್ಕೆ ಪಡೆದು ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ್ದವು. ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ವೀಸಾ ಪಡೆದಿದ್ದ ಶಕೂರ್ ಅವರು ಡ್ಯಾನಿಶ್ ನೆರವಿನೊಂದಿಗೆ ಅಲ್ಲಿಗೆ ಪ್ರಯಾಣಿಸಿದ್ದರು. ಈ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಏಜೆಂಟ್‌ಗಳನ್ನು ಭೇಟಿ ಮಾಡಿದ್ದರು’ ಎಂದು ಹೇಳಿದ್ದಾರೆ.
ಪಾಕಿಸ್ತಾನದಿಂದ ಮರಳಿದ ಬಳಿಕ ವಾಟ್ಸಾಪ್ ಮೂಲಕ ರಹಸ್ಯ ಮಾಹಿತಿಗಳನ್ನು ಶಕೂರ್ ರವಾನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.