ADVERTISEMENT

ಎರಡು ವರ್ಷದಿಂದ ಇತ್ಯರ್ಥವಾಗದ ಕ್ಷಮಾದಾನ ಅರ್ಜಿ: ‘ಸುಪ್ರೀಂ’ ಬೇಸರ

ಪಿಟಿಐ
Published 3 ನವೆಂಬರ್ 2020, 9:03 IST
Last Updated 3 ನವೆಂಬರ್ 2020, 9:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ರಾಜೀವ್‌ಗಾಂಧಿ ಹತ್ಯೆ ಪ್ರಕರಣದ ಅಪರಾಧಿಯೊಬ್ಬರ ಕ್ಷಮಾದಾನ ಅರ್ಜಿ ತಮಿಳುನಾಡು ರಾಜ್ಯಪಾಲರ ಬಳಿ ಎರಡು ವರ್ಷಗಳಿಂದ ತೀರ್ಮಾನವಾಗದೇ ಉಳಿದಿದೆ’ ಎಂಬ ಬಗ್ಗೆ ಸುಪ್ರಿಂಕೋರ್ಟ್‌ ಮಂಗಳವಾರ ಬೇಸರ ವ್ಯಕ್ತಪಡಿಸಿತು.

‘ಅಪರಾಧಿ ಸಲ್ಲಿಸಿರುವ ಅರ್ಜಿಯನ್ನು ಇತ್ಯರ್ಥಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಸಂವಿಧಾನದ ಸೆಕ್ಷನ್ 142 ಅನ್ವಯ ತನಗಿರುವ ಅಧಿಕಾರರ ಬಳಸಿ ರಾಜ್ಯಪಾಲರಿಗೆ ಕೋರಬಹುದೇ ಎಂದು ಅರ್ಜಿದಾರರ ಪರ ವಕೀಲರಿಗೆ ಪ್ರಶ್ನಿಸಿತು.

ಜೀವಾವಧಿ ಶಿಕ್ಷೆಯಲ್ಲಿರುವ ಎ.ಜಿ.ಪರಾರಿವಲನ್ ಪರ ಅವರ ವಕೀಲ ಹಾಜರಿದ್ದರು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್, ಹೇಮಂತ್ ಗುಪ್ತಾ, ಅಜಯ್ ರಸ್ತೋಗಿ ಅವರಿದ್ದ ಪೀಠ, ‘ಈ ಹಂತದಲ್ಲಿ ನಮ್ಮ ಅಧಿಕಾರ ಚಲಾಯಿಸ ಬಯಸುವುದಿಲ್ಲ. ಆದರೆ, ಎರಡು ವರ್ಷದಿಂದ ಅರ್ಜಿ ತೀರ್ಮಾನವಾಗಿಲ್ಲ ಎಂಬ ಬಗ್ಗೆ ನಮಗೆ ಬೇಸರವಿದೆ’ ಎಂದು ತಿಳಿಸಿತು.

ADVERTISEMENT

ಸಿಬಿಐ ನೇತೃತ್ವದ ಬಹುಶೀಸ್ತೀಯ ಮೇಲುಸ್ತವಾರಿ ಸಮಿತಿಯ (ಎಂಡಿಎಂಎ) ತನಿಖೆ ಪೂರ್ಣಗೊಂಡಿರುವ ಕಾರಣ ತಮಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತುಪಡಿಸಬೆಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ಪೀಠವು, ‘ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಆಧರಿಸಿ ತೀರ್ಮಾನಿಸಬೇಕು. ರಾಜ್ಯಪಾಲರು ಆದೇಶ ಹೊರಡಿಸದಿದ್ದರೆ, ಕೋರ್ಟ್ ಏನು ಮಾಡಬೇಕು ಎಂಬುದನ್ನಾದರೂ ತಿಳಿಸಿ’ ಎಂದು ಕೇಳಿತು.

ಬಳಿಕ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಬಾಲಾಜಿ ಶ್ರೀನಿವಾಸನ್ ಅವರಿಗೆ, ‘ಕೋರ್ಟ್‌ನ ಆದೇಶವಿಲ್ಲದೆ ರಾಜ್ಯ ಸರ್ಕಾರವೇ ಏಕೆ ಆದೇಶ ಹೊರಡಿಸುವಂತೆ ರಾಜ್ಯಪಾಲರಿಗೆ ಕೋರಬಾರದು? ಎಂದು ಕೇಳಿತು.

ಈ ಹಂತದಲ್ಲಿ ರಾಜ್ಯಪಾಲರು ಎಂಡಿಎಂಎ ವರದಿ ಕೇಳಿದ್ದಾರೆ ಎಂದು ರಾಜ್ಯ ಸರ್ಕಾರದ ವಕೀಲರು ಪ್ರತಿಕ್ರಿಯಿಸಿದರು.

ಆಗ ಕೇಂದ್ರವನ್ನು ಪ್ರತಿನಿಧಿಸಿದ್ದ ಎ.ಎಸ್.ಜಿ ನಟರಾಜ್‌ ಅವರಿಗೆ ಕೋರ್ಟ್, ‘ರಾಜ್ಯದಿಂದ ಅಂತಹ ಮನವಿ ಬಂದಿದೆಯೇ’ ಎಂದು ಪ್ರಶ್ನಿಸಿತು. ಇದಕ್ಕೆ ನಟರಾಜ್ ಅವರು, ‘ತನಿಖೆ ವ್ಯಾಪ್ತಿ ಯುಕೆ ಮತ್ತು ಶ್ರೀಲಂಕಾದಲ್ಲಿಯೂ ವ್ಯಾಪಿಸಿದೆ’ ಎಂದರು.

‘ಆಗ ಈ ಅರ್ಜಿ ಶಿಕ್ಷೆಗೊಳಗಾಗಿ ಜೈಲಿನಲ್ಲಿ ಇರುವವರಿಗೆ ಸಂಬಂಧಿಸಿದ್ದಲ್ಲ‌’ ಎಂದ ಪೀಠವು, ಇದರ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಿ ಎಂದು ಎಎಸ್‌ಜಿ ಅವರಿಗೆ ಸೂಚಿಸಿತು. ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.