ADVERTISEMENT

ಕೆ–9 ವಜ್ರ–ಟಿ ಫಿರಂಗಿಗೆ ಸಚಿವ ಸಿಂಗ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 9:19 IST
Last Updated 17 ಜನವರಿ 2020, 9:19 IST
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌   

ಹಜಿರಾ, ಗುಜರಾತ್‌: ಎಲ್‌ ಆ್ಯಂಡ್‌ ಟಿ ಕಂಪನಿ ತಯಾರಿಸಿರುವ 51ನೆಯ ಕೆ–9 ವಜ್ರ–ಟಿ ಫಿರಂಗಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗುರುವಾರ ಚಾಲನೆ ನೀಡಿದರು.

ಎಲ್ ಆ್ಯಂಡ್‌ ಟಿ ಕಂಪನಿ ಅಧಿಕಾರಿಗಳು ಸಚಿವರಿಗೆ ಕೆ -9 ವಜ್ರಾ-ಟಿ ಯ ವಿಭಿನ್ನ ತಂತ್ರಗಳ ಮಾಹಿತಿ ನೀಡಿದರು. ಸ್ವಯಂ ಚಾಲಿತ ಹೊವಿಟ್ಜರ್‌ ಇದಾಗಿದ್ದು, ಫಿರಂಗಿ ಅಳವಡಿಸಲಾಗಿರುವ ವಾಹನದಲ್ಲಿ ಸಚಿವ ಸಿಂಗ್ ಕುಳಿತು ಹಜಿರಾದ ಕಾರ್ಖಾನೆಯ ಆವರಣದಲ್ಲಿ ಪರೀಕ್ಷಾರ್ಥವಾಗಿ ಸಂಚಾರ ನಡೆಸಿದರು.

50 ಟನ್‌ ತೂಕವಿರುವ ಈ ಫಿರಂಗಿ, 43 ಕಿಲೋ ಮಿಟರ್‌ ದೂರದ ಗುರಿಗಳಲ್ಲಿ 47 ಕೆ.ಜಿ ಬಾಂಬ್‌ಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ.

ADVERTISEMENT

ಕೇಂದ್ರದ ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿ ಮತ್ತು ರಕ್ಷಣಾ ಸಚಿವಾಲಯದ ನಡುವೆ 2017ರಲ್ಲಿ ಒಪ್ಪಂದ ಆಗಿದೆ. 42 ತಿಂಗಳಲ್ಲಿ 100 ಕೆ–9 ವಜ್ರ ಫಿರಂಗಿಗಳನ್ನು ರಕ್ಷಣಾ ಇಲಾಖೆಗೆ ಪೂರೈಸಲು ₹4,500 ಕೋಟಿ ಮೊತ್ತದ ಗುತ್ತಿಗೆಯನ್ನು ಈ ಒಪ್ಪಂದ ಒಳಗೊಂಡಿದೆ.

ರಾಜನಾಥ್‌ ಸಿಂಗ್‌ ಅವರು, ಫಿರಂಗಿಗೆ ಕುಂಕುಮ ಹಚ್ಚಿ, ಸ್ವಸ್ತಿಕ್‌ ಚಿಹ್ನೆ ಬರೆದು ಪೂಜೆ ಸಲ್ಲಿಸಿದರು.

ಕಂಪನಿ ಸಿಬ್ಬಂದಿಯ ಬದ್ಧತೆಯನ್ನು ಶ್ಲಾಘಿಸಿದ ಅವರು, ಹೊಸ ಭಾರತದ ಹೊಸ ಆಲೋಚನೆಯ ಸಂಕೇತ ಇದಾಗಿದೆ. ಕೆ–9 ವಜ್ರ ಫಿರಂಗಿ ಅತ್ಯಂತ ಬಲಿಷ್ಠವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, ಈ ಮೂಲಕ ಬಲಿಷ್ಠ ಭಾರತ ಕಾಣಬಹುದು ಎಂದರು.

ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೆ.ಡಿ.ಪಾಟೀಲ್‌ ಮತ್ತು ಅಧ್ಯಕ್ಷ ಎಂ.ಎಂ.ನಾಯ್ಕ್‌ ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.