ADVERTISEMENT

ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿದ್ದ ಕಾಂಗ್ರೆಸ್: ರಾಜನಾಥ್ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 4:59 IST
Last Updated 15 ಫೆಬ್ರುವರಿ 2022, 4:59 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ಲಂಗ್‌ಥಾಬಲ್ (ಮಣಿಪುರ): ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿತ್ತು. ಕಳೆದ ಐದು ವರ್ಷಗಳಲ್ಲಿ ಮಣಿಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯಗಳ ಅದೃಷ್ಟ ಮತ್ತು ಚಿತ್ರಣವನ್ನೇ ಬದಲಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ದಶಕಗಳಿಂದ ಈಶಾನ್ಯ ರಾಜ್ಯಗಳನ್ನು ಕಡೆಗಣಿಸಿತ್ತು. ಇದು ಆ ಪಕ್ಷದ ಅಭಿವೃದ್ಧಿ ವಿರೋಧಿ, ಈಶಾನ್ಯ ರಾಜ್ಯಗಳ ವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಮಣಿಪುರದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇಂದು ಮಣಿಪುರವು ಅಭಿವೃದ್ಧಿಯಿಂದಾಗಿ ಗುರುತಿಸಿಕೊಂಡಿದೆಯೇ ಹೊರತು ಹಿಂಸೆಯಿಂದಲ್ಲ. ಅಭಿವೃದ್ಧಿಯ ಆತ್ಮವಿಶ್ವಾಸವೀಗ ರಾಜ್ಯದಲ್ಲಿ ಕಾಣಿಸುತ್ತಿದೆ ಎಂದು ರಾಜನಾಥ್ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

‘ಗಲಭೆಗಳು ಈಶಾನ್ಯ ರಾಜ್ಯಗಳ ಪ್ರಮುಖ ಸಮಸ್ಯೆಯಾಗಿದ್ದವು. ಆದರೆ, ಮೋದಿ ಅವರು ಪ್ರಧಾನಿಯಾದ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಿದೆ. ಹಿಂಸಾಚಾರದ ಪ್ರಕರಣಗಳು ಇಂದು ಕಡಿಮೆಯಾಗಿವೆ’ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಮತ್ತು ಸರ್ಕಾರವನ್ನೂ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.

ಮಣಿಪುರದಲ್ಲಿ ಫೆಬ್ರುವರಿ 28 ಹಾಗೂ ಮಾರ್ಚ್ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.