ADVERTISEMENT

ರಾಜ್ಯಸಭೆ, ಪರಿಷತ್ ಚುನಾವಣೆ: ಅರುಣ್‌ ಸಿಂಗ್ ಜೊತೆ ಚರ್ಚಿಸಿದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 5:40 IST
Last Updated 21 ಮೇ 2022, 5:40 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ನವದೆಹಲಿ: ವಿಧಾನ ಪರಿಷತ್ ‌ಹಾಗೂ ರಾಜ್ಯಸಭೆ‌ ಚುನಾವಣೆಯಲ್ಲಿ ಸ್ಪರ್ಧಿಸಲಿರುವ‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ‌ ಚರ್ಚೆ ನಡೆಸಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಬೆಳಿಗ್ಗೆ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಬಂದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಕುರಿತು ವರಿಷ್ಠರೊಂದಿಗೆ ಚರ್ಚೆ ನಡೆಸಿಲ್ಲ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆದಿದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬುದರ ಕುರಿತು ಪಕ್ಷದ ಹಿರಿಯ ಮುಖಂಡ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರನ್ನು ಭೇಟಿ ಮಾಡಲಾಗಿಲ್ಲ ಎಂದು ಅವರು ಹೇಳಿದರು.

ಪ್ರವಾಹ; ಸಭೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿ ಸಂಕಷ್ಟಕ್ಕೆ ಈಡಾದವರ ನೆರವಿಗೆ‌ ಧಾವಿಸುವ ಕುರಿತು, ಬೆಂಗಳೂರಿಗೆ ತೆರಳಿದ ಕೂಡಲೇ ಆಯಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರನ್ಸ್ ನಡೆಸಿ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.

ಶುಕ್ರವಾರ ಸಂಜೆಯೇ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿದ್ದ ಬೊಮ್ಮಾಯಿ, ಕೇಂದ್ರದ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ಬೆಳಗಿನ ಜಾವ 1 ಗಂಟೆಗೆ ಕರ್ನಾಟಕ ಭವನಕ್ಕೆ ಬಂದು ತಂಗಿದ್ದ ಅವರು ಬೆಳಿಗ್ಗೆ 9ಕ್ಕೆ ಅರುಣ್ ಸಿಂಗ್ ಭೇಟಿಗೆ ತೆರಳಿದ್ದರು. ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.