ADVERTISEMENT

ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ನಿಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 5:29 IST
Last Updated 8 ಸೆಪ್ಟೆಂಬರ್ 2019, 5:29 IST
   

ನವದೆಹಲಿ: ಹಿರಿಯನ್ಯಾಯವಾದಿ, ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ (96) ಭಾನುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಳಗ್ಗೆ 7.45ಕ್ಕೆ ಜೇಠ್ಮಲಾನಿ ನಿಧನರಾಗಿದ್ದಾರೆ ಎಂದು ಪುತ್ರ ಮಹೇಶ್ಜೇಠ್ಮಲಾನಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದಿದ್ದರು ಎಂದು ಮಹೇಶ್ ಹೇಳಿದ್ದಾರೆ.

ಇಂದು ಸಂಜೆ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಹಲವಾರು ಮಹತ್ತರ ಪ್ರಕರಣಗಳನ್ನು ವಾದಿಸಿದ್ದ ಜೇಠ್ಮಲಾನಿ ಸೆಪ್ಟೆಂಬರ್ 2017ರಲ್ಲಿ ನಿವೃತ್ತಿ ಹೊಂದಿದ್ದರು.

ADVERTISEMENT

1959ರಲ್ಲಿ ಕೆಎಂ ನಾನಾವತಿ vs ಮಹಾರಾಷ್ಟ್ರ ಸರ್ಕಾರದ ಪ್ರಕರಣದಿಂದ ಹಿಡಿದು 2011ರ ಬಹುಕೋಟಿ 2ಜಿ ಹಗರಣ ಕೇಸುಗಳನ್ನು ಜೇಠ್ಮಲಾನಿ ವಾದಿಸಿದ್ದರು. ಹವಾಲಾ ಪ್ರಕರಣಗಲ್ಲಿ ಎಲ್‌ಕೆ ಅಡ್ವಾಣಿ ಪರ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿದಾಗ ಕೇಜ್ರಿವಾಲ್ ಪರ ವಾದಿಸಿದ್ದವಕೀಲರು ಜೇಠ್ಮಲಾನಿ.

1996, 1999 ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಜೇಠ್ಮಲಾನಿ, ದೇಶದಲ್ಲಿಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಾದಿಸಿದ್ದರು ಇವರು.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ, ಅಂತರರಾಷ್ಟ್ರೀಯ ಬಾರ್ ಅಸೋಸಿಯೇಷನ್ ಸದಸ್ಯರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದರು.
ಕಾನೂನು ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಲಭಿಸಿದೆ.

ಈಗ ಪಾಕಿಸ್ತಾನದ ಭಾಗವಾಗಿರುವ ಶಿಕಾರ್‌ಪುರ್‌ನಲ್ಲಿ 1923 ಸೆಪ್ಟೆಂಬರ್ 14ರಂದು ಜನಿಸಿದ ಜೇಠ್ಮಲಾನಿ ಶಾಲೆಯಲ್ಲಿ ಟ್ರಿಪಲ್ ಪ್ರೊಮೋಷನ್ ಪಡೆದಿದ್ದರು. ಹಾಗಾಗಿ 17ನೇ ವಯಸ್ಸಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದರು. ವಕೀಲರಾಗಿ ದಾಖಲಾತಿಯಾಗಲು ಕಿರಿಯ ವಯಸ್ಸು ಎಂದು ಅಧಿಕಾರಿಗಳು ತಡೆಯೊಡ್ಡಿದಾಗ ಸಿಂಧ್‌ನಲ್ಲಿ ನ್ಯಾಯಮೂರ್ತಿ ಗಾಡ್‌ಫ್ರೆ ಡೇವಿಸ್ ಮುಂದೆ ಬಾರ್ ಕೌನ್ಸಿಲ್ ಆಫ್ ಸಿಂಧ್‌ನಲ್ಲಿ ದಾಖಲಾತಿಗಾಗಿರುವ ಪ್ರಾಯ ಮಿತಿಯಲ್ಲಿ ಬದಲಾವಣೆ ತರಲು ಜೇಠ್ಮಲಾನಿ ವಾದಿಸಿದ್ದರು. ಇದರ ಪರಿಣಾಮ ಸಿಂಧ್‌ನ ಮುಖ್ಯ ನ್ಯಾಯಮೂರ್ತಿ ಬಾರ್ ಕೌನ್ಸಿಲ್‌ನ ದಾಖಲಾತಿ ಪ್ರಾಯ ಮಿತಿ ಬಗ್ಗೆ ವಿಶೇಷ ಮಸೂದೆ ಅಂಗೀಕರಿಸಿದ್ದರು. ಇದು ಜೇಠ್ಮಲಾನಿವಾದಿಸಿದ ಮೊದಲ ಕೇಸ್ ಆಗಿತ್ತು.

ಮುಂಬೈನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಇವರು ಮೊದಲ ಪ್ರಕರಣದಲ್ಲಿ ಸ್ವೀಕರಿಸಿದ ಸಂಭಾವನೆ ₹1 ಆಗಿತ್ತು. ಆಮೇಲೆ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದು ಇತಿಹಾಸ. ಭೂಗತ ದೊರೆ ಹಾಜಿ ಮಸ್ತಾನ್ ಸೇರಿದಂತೆ ಹಲವಾರು ಭೂಗತ ಪಾತಕಿಗಳ ಪರ ವಾದಿಸಿದ್ದ ಜೇಠ್ಮಲಾನಿ ಭೂಗತ ದೊರೆಗಳ ವಕೀಲರು ಎಂದು ಹಣೆಪಟ್ಟಿ ಹೊಂದಿದ್ದರು.

ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳ ಪರ ಜೇಠ್ಮಲಾನಿ ವಾದಿಸಿದಾಗ ದೇಶಕ್ಕೆ ದೇಶವೇ ಅಚ್ಚರಿಗೊಂಡಿತ್ತು. ಕೇತನ್ ಪರೇಖ್, ಹರ್ಷಾದ್ ಮೆಹ್ತಾ ಮೊದಲಾದವರ ವಕೀಲರಾಗಿದ್ದ ಇವರು ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಪ್ರಧಾನ ಆರೋಪಿ ಮನು ಶರ್ಮಾ ಪರ ವಾದಿಸಿದ್ದರು.

ವಿವಾದಿತ 2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಕನಿಮೊಳಿ ಪರ ಕೇಸು ವಾದಿಸಿದ್ದ ಇವರು ಅಕ್ರಮ ಗಣಿಗಾರಿಕೆ ಪ್ರಕಣದಲ್ಲಿ ಬಿ.ಎಸ್. ಯಡಿಯೂರಪ್ಪ ಪರ ವಾದ ಮಾಡಿದ್ದರು.
ಜೆಸ್ಸಿಕಾ ಲಾಲ್ ಪ್ರಕರಣ, ಆಸಾರಾಂ ಬಾಪು, ಲಾಲು ಪ್ರಸಾದ್ ಯಾದವ್ ಅವರ ಮೇವು ಹಗರಣಗಳನ್ನು ವಾದಿಸಿದ್ದರು ಜೇಠ್ಮಲಾನಿ.

ಅತೀ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದರೂ ಕೆಲವೊಂದು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಉಚಿತವಾಗಿ ವಾದಿಸಿದ್ದೂ ಇದೆ.

ಬಿಜೆಪಿ ಸದಸ್ಯರಾಗಿದ್ದರೂ ಹಲವಾರು ಬಾರಿ ಅವರು ಪಕ್ಷವನ್ನು ಟೀಕಿಸಿದ್ದೂ ಇದೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಇವರು ವಿವಾದಕ್ಕೆ ಸಿಲಕಿ 2000 ಇಸವಿಯಲ್ಲಿ ರಾಜೀನಾಮೆ ನೀಡಬೇಕಾಗಿ ಬಂತು. ಅದೇ ವರ್ಷ ಅವರನ್ನು ಪಕ್ಷ ಉಚ್ಛಾಟನೆ ಮಾಡಿತು.

2004ರಲ್ಲಿ ಲಖನೌನಲ್ಲಿ ವಾಜಪೇಯಿ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿಯಲ್ಲಿ ನಿತಿನ್ ಗಡ್ಕರಿ ಅಧ್ಯಕ್ಷರಾಗಿದ್ದಾಗ 2010ರಲ್ಲಿ ಮತ್ತೆ ಬಿಜೆಪಿಗೆ ಬಂದ ಜೇಠ್ಮಲಾನಿ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮೊದಲಾದವರನ್ನು ಟೀಕಿಸಿದ ಕಾರಣ 2013ರಲ್ಲಿ ಬಿಜೆಪಿ ಇವರನ್ನು ಪಕ್ಷದಿಂದ ಉಚ್ಚಾಟಿಸಿತು.

ಜೇಠ್ಮಲಾನಿ 6 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. 1987ರಲ್ಲಿ ಭಾರತ್ಮುಕ್ತಿ ಮೋರ್ಚಾಎಂಬ ಚಳುವಳಿ ಆರಂಭಿದ್ದ ಇವರು 1995ರಲ್ಲಿ ಪವಿತ್ರ ಹಿಂದೂಸ್ತಾನ್ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.