ADVERTISEMENT

ಡಿಸೆಂಬರ್‌ನಲ್ಲಿ ಮಂದಿರ ನಿರ್ಮಾಣ: ವಿಶ್ವ ಹಿಂದೂ ಪರಿಷತ್‌

‘ಧರ್ಮಾದೇಶ’ ಸಮಾವೇಶದಲ್ಲಿ ಬಿಜೆಪಿ ಮಾಜಿ ಸಂಸದ ರಾಂ ವಿಲಾಸ್‌ ವೇದಾಂತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 20:01 IST
Last Updated 3 ನವೆಂಬರ್ 2018, 20:01 IST
   

ನವದೆಹಲಿ: ಇದೇ ಡಿಸೆಂಬರ್‌ನಲ್ಲಿ ಪರಸ್ಪರ ಒಮ್ಮತದ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಶನಿವಾರ ಘೋಷಿಸಿದೆ.

ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಡಿಸೆಂಬರ್ 6ರಂದು ಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು ಎನ್ನುವುದು ಸಾಧು, ಸಂತರ ಅಪೇಕ್ಷೆಯಾಗಿದೆ ಎಂದು ವಿಎಚ್‌ಪಿ ನಾಯಕ ಮತ್ತು ಬಿಜೆಪಿಯ ಮಾಜಿ ಸಂಸದ ರಾಂ ವಿಲಾಸ್‌ ವೇದಾಂತಿ ಹೇಳಿದ್ದಾರೆ.

ನಗರದ ತಲ್‌ಕಟೋರಾ ಕ್ರೀಡಾಂಗಣದಲ್ಲಿ ಆರಂಭವಾದ ಅಖಿಲ ಭಾರತೀಯ ಸಂತ ಸಮಿತಿಯ ಎರಡು ದಿನಗಳ ‘ಧರ್ಮಾದೇಶ’ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಪರಸ್ಪರ ಒಮ್ಮತದ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಲಖನೌದಲ್ಲಿ ಅಲ್ಲಾಹುವಿನ ಹೆಸರಿನಲ್ಲಿ ಮಸೀದಿ ನಿರ್ಮಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೇದಾಂತಿ ಹೇಳಿದ್ದಾರೆ.

ಸುಗ್ರೀವಾಜ್ಞೆ ಅಥವಾ ಕಾನೂನಿನಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಿಲ್ಲ. ಎರಡೂ ಕಡೆಯವರ ಪರಸ್ಪರ ಒಮ್ಮತದ ಮೂಲಕ ಮಾತ್ರ ಇದು ಸಾಧ್ಯ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸಿದರೆ ಕೋಮುಗಲಭೆ ಆರಂಭವಾಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ವೇದಾಂತಿ ಎಚ್ಚರಿಸಿದ್ದಾರೆ.

ಮಂದಿರ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವುದು ಹಿಂದೂಗಳಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅಭಿಪ್ರಾಯಪಟ್ಟಿದ್ದಾರೆ.

‘ನರೇಂದ್ರ ಮೋದಿ ರಾಮನ ಅವತಾರ’

ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಅವತಾರ. ಅವರ ಅಧಿಕಾರ ಅವಧಿಯಲ್ಲಿ ಮಂದಿರ ನಿರ್ಮಾಣವಾಗದಿದ್ದರೆ ಅದು ನಿಜಕ್ಕೂ ಆಶ್ಚರ್ಯದ ಸಂಗತಿ ಎಂದು ಉತ್ತರಾಖಂಡದ ಸ್ವಾಮಿ ವಿವೇಕಾನಂದ ಹೇಳಿದ್ದಾರೆ.

ಸೋಮನಾಥ ದೇವಸ್ಥಾನದ ಮಾದರಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೇ ದಾರಿ ಕಂಡುಹಿಡಿಯಬೇಕು ಎಂದು ರಮಾನಂದಾಚಾರ್ಯ ಸ್ವಾಮಿ ಹಂಸದೇವಾಚಾರ್ಯಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.