ADVERTISEMENT

ಕೋವಿಡ್‌ ಲಸಿಕೆ ಪೂರೈಕೆ: ‘ಕೋಲ್ಡ್‌ ಚೈನ್‘ ಹೆಚ್ಚಿಸುವ ಅಗತ್ಯ

ರೋಗನಿರೋಧಕ ತಜ್ಞರು, ಉದ್ಯಮಿಗಳ ಅಭಿಮತ

ಪಿಟಿಐ
Published 8 ಅಕ್ಟೋಬರ್ 2020, 12:56 IST
Last Updated 8 ಅಕ್ಟೋಬರ್ 2020, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೋವಿಡ್‌ 19 ಲಸಿಕೆಯನ್ನು ಸುರಕ್ಷಿತವಾಗಿ ವಿತರಿಸಲು ಭಾರತದಲ್ಲಿ ಪ್ರಸ್ತುತವಿರುವ ಕೋಲ್ಡ್‌ ಚೈನ್ ( ಉತ್ಪಾದನಾ ಹಂತದಿಂದ ಬಳಕೆಯ ಹಂತದವರೆಗೆ ಶಿಫಾರಸು ಮಾಡಲಾದ ತಾಪಮಾನದಲ್ಲಿ ಲಸಿಕೆಗಳನ್ನು ಸಂಗ್ರಹಿಸಿ ಸಾಗಿಸುವ ವ್ಯವಸ್ಥೆ) ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ‘ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಸಂಗ್ರಹಿಸುವುದು ಮತ್ತು ಸುರಕ್ಷಿತವಾಗಿ ಜನರಿಗೆ ತಲುಪಿಸುವುದು ತುಂಬಾ ಸವಾಲಿನ ಕೆಲಸ. ಈಗಾಗಲೇ ಮುಂಚೂಣಿಯ ಲ್ಲಿರುವ ಲಸಿಕಾ ತಯಾರಕಾ ಕಂಪನಿಗಳಿಗೆ ‘ಹೆಚ್ಚುವರಿ ಶೈತ್ಯಾಗಾರಗಳು ಅಗತ್ಯವಾಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪರಿಣಾಮಕಾರಿಯಾಗಿ ಸರಬರಾಜು ಮಾಡಲು ಖಾಸಗಿ ಕ್ಷೇತ್ರದವರನ್ನೂ ಬಳಸಿಕೊಳ್ಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ತಯಾರಿಕೆ ಹಂತದ ಮುಂಚೂಣಿಯಲ್ಲಿರುವ ಎಲ್ಲ ಲಸಿಕಾ ಸಂಸ್ಥೆಗಳಿಗೂ ಹೆಚ್ಚು ಕೋಲ್ಡ್‌ ಚೈನ್ ಬೇಕಾಗುವುದಿಲ್ಲ. ಆದರೆ, ಭಾರತದಲ್ಲಿ ಈ ಲಸಿಕೆಗಳನ್ನು ಪೂರೈಸುವುದು ಹೆಚ್ಚು ಸವಾಲಿನ ಕೆಲಸವಾಗುತ್ತದೆ‘ ಎಂದು ನವದೆಹಲಿಯನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ) ಯ ಸತ್ಯಜಿತ್ ರಾತ್ ಹೇಳಿದ್ದಾರೆ.

ADVERTISEMENT

ಕೆಲವು ಲಸಿಕೆಗಳನ್ನು ಇಂತಿಷ್ಟೇ ತಾಪಮಾನದಲ್ಲಿ ಶೇಖರಿಸಿಡಬೇಕೆಂದು ರೋಗನಿರೋಧಕ ತಜ್ಞರು ಹೇಳುತ್ತಾರೆ. ಆದರೆ, ವಾಸ್ತವವಾಗಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿ ಲಸಿಕೆಗಳನ್ನು ನಿರ್ವಹಿಸುವುದು ಕಷ್ಟ. ಲಸಿಕೆಗಳು ಮಾರುಕಟ್ಟೆಗೆ ಹೋಗಲು ಸಿದ್ಧವಾದ ನಂತರವೇ ನಿಜವಾದ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದರು.

ಈಗಾಗಲೇ ಕೆಲವು ಲಸಿಕೆಗಳು ಪ್ರಯೋಗದ ಮುಂದುವರಿದ ಹಂತಗಳಲ್ಲಿವೆ. ಇಂಥ ಲಸಿಕೆಗಳು ಮುಂದಿನ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಬರಬಹುದು. ಕೊನೆಕ್ಷಣದಲ್ಲಿ ಲಸಿಕೆಯ ಸುರಕ್ಷತೆ ವಿಚಾರದಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ಎಚ್ಚರವಹಿಸುವ ಅಗತ್ಯವಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೋವಿಡ್–19 ಚಿಕಿತ್ಸೆಗಾಗಿ ಭಾರತಕ್ಕೆ 2021ರ ಜುಲೈ ವೇಳೆಗೆ ಅಂದಾಜು 40ರಿಂದ 50 ಕೋಟಿ ಡೋಸ್‌ ಲಸಿಕೆ ತಲುಪಲಿದ್ದು, ಇದನ್ನು 20ರಿಂದ 25 ಕೋಟಿ ಜನರಿಗೆ ನೀಡಬಹುದು ಎಂದು ಸರ್ಕಾರ ಅಂದಾಜಿಸಿರುವುದಾಗಿ ಹೇಳಿದ್ದಾರೆ. ಜತೆಗೆ, ಕೇಂದ್ರ ಸರ್ಕಾರ ಈಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕಾಗಿರುವ ಜನರ ಪಟ್ಟಿಯನ್ನು ಅಕ್ಟೋಬರ್ ಅಂತ್ಯದೊಳಗೇ ಸಲ್ಲಿಸಬೇಕು ಎಂದೂ ರಾಜ್ಯಗಳಿಗೆ ಸೂಚನೆ ನೀಡಿದೆ.

'ಬೇರೆ ಔಷಧಿಗಳಿಗಿಂತ ಭಿನ್ನವಾಗಿ, ಈ ಎಲ್ಲಾ ಲಸಿಕೆಗಳನ್ನು ತಣ್ಣನೆಯ ತಾಪಮಾನದಲ್ಲಿ ಸರಬರಾಜು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಲಸಿಕೆಗಳನ್ನು ಸಾಗಿಸಬೇಕು‘ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ರಾಘವನ್ ವರದರಾಜನ್ ಹೇಳಿದ್ದಾರೆ.

ಲಸಿಕೆಯನ್ನು ಶೀತದ ವಾತಾರಣದಲ್ಲಿಡುವುದು ಅವಶ್ಯಕ. ಆದರೆ, ನೂರು ಕೋಟಿಗೂ ಹೆಚ್ಚು ಡೋಸೇಜ್‌ಗಳನ್ನು ಈ ರೀತಿ ಕಾಪಿಟ್ಟು ಪೂರೈಸುವುದು ತುಸು ಕಷ್ಟದ ಕೆಲಸ. ಅದರಲ್ಲೂ ಹೆಚ್ಚು ಜನಸಂಖ್ಯೆ ಭಾರತದಲ್ಲಿ ಇದು ಕಠಿಣ‘ ಎನ್ನುತ್ತಾರೆ ರಾಘವನ್.

‘ಹೆಚ್ಚಿನ ಲಸಿಕೆಗಳು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಮತ್ತು ಮರು ತಂಪಾಗಿಸುವುದರಿಂದ ಅನುಕೂಲವಾಗುವುದಿಲ್ಲ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.