ADVERTISEMENT

ಪಟ್ನಾ | ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಪರ ಹೈಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 22:04 IST
Last Updated 16 ಜುಲೈ 2020, 22:04 IST
   

ಪಟ್ನಾ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಜೈಲು ಸೇರಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ವೃಂದಾ ಗ್ರೋವರ್ ಹಾಗೂ ಇಂದಿರಾ ಜೈಸಿಂಗ್ ಅವರು ಪಟ್ನಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯ ಮೊರೆ ಹೋಗಿದ್ದಾರೆ.

ಅರಾರಿಯಾ ಎಂಬಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಯುವತಿಯ ಹೇಳಿಕೆ ದಾಖಲಿಸಿಕೊಳ್ಳುವ ದಿನ ನ್ಯಾಯಾಂಗ ನಿಂದನೆ ಆರೋಪದಲ್ಲಿ ಮ್ಯಾಜಿಸ್ಟ್ರೇಟ್ ಅವರು ಯುವತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಯುವತಿಯನ್ನು ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳದಿಂದ 250 ಕಿಲೋಮೀಟರ್ ದೂರದ ದಾಲ್‌ಸಿಂಗ್ ಸರಾಯ್ ಜೈಲಿಗೆ ಕಳುಹಿಸಲಾಗಿದೆ.

‘ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸುವ ವೇಳೆ ಯುವತಿ ತೋರಿದ ವಿಚಲಿತ ವರ್ತನೆಯು ತಮಗಾದ ವೈಯಕ್ತಿಕ ಅಪಮಾನವೆಂದು ಭಾವಿಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಸಂತ್ರಸ್ತೆಯನ್ನು ಗುರುತಿಸಬಹುದಾದ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳಿಗೆ ನೀಡಲಾಗಿದೆ’ ಎಂದು ವಕೀಲರು ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘ಅತ್ಯಾಚಾರ ನಡೆದ ನಾಲ್ಕು ದಿನಗಳ ಬಳಿಕ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಆಕೆ ದಿಗ್ಭ್ರಮೆಗೊಂಡಿದ್ದಳು. ಇನ್ನೂ ಆ ದುರ್ಘಟನೆಯ ಕಹಿಯಿಂದ ಆಕೆ ಹೊರಬಂದಿರಲಿಲ್ಲ. ಹೇಳಿಕೆ ಪಡೆದುಕೊಳ್ಳವ ಸಿಬ್ಬಂದಿ ಎದುರು ಘಟನೆಯನ್ನು ವಿವರಿಸುವ ವೇಳೆ ಆಕೆ ಗಾಬರಿಗೊಂಡಿದ್ದಳು. ನ್ಯಾಯಾಧೀಶರು ಘಟನೆಯನ್ನು ಈ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವಿತ್ತು ಎಂದು ನಾವು ಗೌರವ‍‍‍ಪೂರ್ವಕವಾಗಿ ಹೇಳುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿಗೆ ಸಲ್ಲಿಸಿದ ಪತ್ರದಲ್ಲಿ ವಿವರಿಸಲಾಗಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಗೆ ಕೋವಿಡ್–19 ಪರೀಕ್ಷೆ ನಡೆಸಿಲ್ಲ. ಆಕೆಗೆ ವಿಧಿಸಿರುವ ಕಾರಾಗೃಹವಾಸ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಕೀಲರ ತಂಡ ಆತಂಕ ವ್ಯಕ್ತಪಡಿಸಿದೆ. ಅರ್ಜಿಗೆ 376 ವಕೀಲರು ಸಹಿ ಹಾಕಿದ್ದಾರೆ.

ಟ್ರ್ಯಾಕ್ಟರ್ ಹತ್ತಿಸಿ ಅತ್ಯಾಚಾರ ಸಂತ್ರಸ್ತೆಯ ಹತ್ಯೆ
ಲಖನೌ: ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹಾಗೂ ಆಕೆಯ ತಾಯಿಯನ್ನು ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ವರದಿಯಾಗಿದೆ.

ಮಾರುಕಟ್ಟೆಯಿಂದ ಬರುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಯಶ್‌ವೀರ್‌ ರಜಪೂತ್‌ ಎಂಬಾತ ಟ್ರ್ಯಾಕ್ಟರ್ ಹತ್ತಿಸಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಖಂಡಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ, ಆರೋಪಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಸಂತ್ರಸ್ತೆಯ ಕುಟುಂಬ ಹಾಗೂ ಯಶ್‌ವೀರ್‌ ಕುಟುಂಬದ ನಡುವೆ ಮೊದಲಿನಿಂದಲೂ ವೈರತ್ವ ಇತ್ತು. ನಾಲ್ಕು ವರ್ಷಗಳ ಹಿಂದೆ ಯಶ್‌ವೀರ್ ತಂದೆಯನ್ನು ಸಂತ್ರಸ್ತೆಯ ಕುಟುಂಬದವರು ಹತ್ಯೆ ಮಾಡಿದ್ದರು. ಈ ಆರೋಪದಲ್ಲಿ ಆಕೆಯ ಕುಟುಂಬದ ಇಬ್ಬರು ಕಾರಾಗೃಹವಾಸ ಅನುಭವಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಯಶ್‌ವೀರ್ ಹಾಗೂ ಇಬ್ಬರು ಸ್ನೇಹಿತರ ವಿರುದ್ಧ ಸಂತ್ರಸ್ತೆಯ ತಾಯಿಯು ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ತನ್ನ ತಂದೆಯ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಕ್ರಮದಿಂದ ಪಾರಾಗುವ ಸಲುವಾಗಿ ಯಶ್‌ವೀರ್‌ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.