ADVERTISEMENT

ದೆಹಲಿಯಲ್ಲಿ ನೈಜ ಅನುಭವದ ತಾಪಮಾನ 49 ಡಿಗ್ರಿ ಸೆಲ್ಸಿಯಸ್: ಆರೆಂಜ್ ಅಲರ್ಟ್

ಪಿಟಿಐ
Published 9 ಜೂನ್ 2025, 16:24 IST
Last Updated 9 ಜೂನ್ 2025, 16:24 IST
   

ನವದೆಹಲಿ: ದೆಹಲಿಯಲ್ಲಿ ನೈಜ ಅನುಭವದ ತಾಪಮಾನ 48.9 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಗಾಳಿ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ

ಜಾಗರೂಕರಾಗಿರುವಂತೆ ಮತ್ತು ಶಾಖದ ಅಲೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಸೋಮವಾರ ನಗರದಲ್ಲಿ ಗರಿಷ್ಠ ತಾಪಮಾನವು 43.4 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುಮಾನದ ಸರಾಸರಿಗಿಂತ 3.4 ಡಿಗ್ರಿ ಹೆಚ್ಚಾಗಿದೆ.

ADVERTISEMENT

ಕನಿಷ್ಠ ತಾಪಮಾನವು 27.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರೆ, ಆರ್ದ್ರತೆಯ ಮಟ್ಟವು ಶೇ48 ರಿಂದ 25 ರವರೆಗೆ ಏರಿಳಿತಗೊಂಡು ಹವಾಮಾನವು ಇನ್ನಷ್ಟು ಬಿಸಿಯಾಗಿತ್ತು.

ಕನಿಷ್ಠ ಜೂನ್ 12ರವರೆಗೂ ದೆಹಲಿಯಲ್ಲಿ ಬಿಸಿಗಾಳಿಯ ವಾತಾವರಣ ಮುಂದುವರಿಯಲಿದೆ. ಹಗಲಿನ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರಲಿದೆ. ಆದರೆ, ರಾತ್ರಿ ಸುಮಾರು 28 ಡಿಗ್ರಿ ಸೆಲ್ಸಿಯಸ್‌ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹರಿಯಾಣ,ಚಂಡೀಗಢ,ದೆಹಲಿಯಲ್ಲಿ ಬಿಸಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದೆ. ಹಿಸಾರ್, ಸಿರ್ಸಾ, ರೋಹ್ಟಕ್ ಮತ್ತು ಅಯನಗರಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ಇತ್ತು.

ಸೂರ್ಯಾಸ್ತದ ನಂತರವೂ ದೆಹಲಿಯಲ್ಲಿ ಉಷ್ಣತೆ ಹೆಚ್ಚಿದ್ದು, ವೃದ್ಧರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆಗಳಿರುವವರಿಗೆ ಶಾಖ ಸಂಬಂಧಿತ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಆತಂಕ ಎದುರಾಗಿದೆ.

ಜೂನ್ 12ರಿಂದ ದೆಹಲಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬರಬಹುದು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.