ADVERTISEMENT

ಇವಿಎಂ: ಜನಾಭಿಪ್ರಾಯಕ್ಕೆ ಆಗ್ರಹ

ಪಿಟಿಐ
Published 17 ಜೂನ್ 2019, 19:39 IST
Last Updated 17 ಜೂನ್ 2019, 19:39 IST
   

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ‘ಗಂಭೀರ ಅನುಮಾನಗಳಿವೆ’ ಎಂದು ಹೇಳಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ. ವೀರಪ್ಪ ಮೊಯಿಲಿ, ಮತಯಂತ್ರ ಬಳಸಬೇಕೋ ಅಥವಾ ಹಿಂದಿನಂತೆ ಮತಪತ್ರವನ್ನೇ ಬಳಸಬೇಕೋ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

‘ಹೀಗೆ ಜನಾಭಿಪ್ರಾಯವನ್ನು ಕೂಡಾ ಲಿಖಿತವಾಗಿಯೇ ಪಡೆಯಬೇಕು. ಇದಕ್ಕಾಗಿ ಮತಯಂತ್ರಗಳನ್ನು ಬಳಸಬಾರದು. ನಮಗೆ ಮತಯಂತ್ರಗಳ ಮೇಲೆ ವಿಶ್ವಾಸವಿಲ್ಲ’ ಎಂದು ಸೋಮವಾರ ಅವರು ಹೇಳಿದ್ದಾರೆ.

‘ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಎಲ್ಲರೂ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇದು ಗಂಭೀರವಾದ ವಿಷಯ. ಅಮೆರಿಕ ಸೇರಿದಂತೆ ಇವಿಎಂ ಬಳಸುತ್ತಿದ್ದ ಅನೇಕ ರಾಷ್ಟ್ರಗಳು ಈಗ ಮತಪತ್ರಗಳನ್ನು ಬಳಸಲು ಶುರು ಮಾಡಿವೆ’ ಎಂದು ಉಲ್ಲೇಖಿಸಿದರು.

ADVERTISEMENT

‘ಗಂಭೀರ ಸ್ವರೂಪದ ಅನುಮಾನ ವ್ಯಕ್ತವಾದಾಗ, ಚುನಾವಣಾ ಆಯೋಗ ಮತ್ತು ಸರ್ಕಾರ ಅದನ್ನು ಬಗೆಹರಿಸಲು ಮುಂದಾಗಬೇಕು. ಅಗತ್ಯ ಎನಿಸಿದರೆ ಇದಕ್ಕಾಗಿ ಜನಾಭಿಪ್ರಾಯವನ್ನು ಪಡೆಯಬೇಕು. ಸರ್ಕಾರ ಇದಕ್ಕೆ ಮುಂದಾಗುವುದು ಎಂದು ಭಾವಿಸುತ್ತೇನೆ ಎಂದರು.

‘ಜನಾಭಿಪ್ರಾಯ ಏನೇ ಬಂದರೂ, ಈ ಕುರಿತ ಶಂಕೆಯಾದರೂ ಬಗೆಹರಿಯಲಿದೆ’ ಎಂದರು.

ಕಾಂಗ್ರೆಸ್‌ಗೆ ಶಸ್ತ್ರಚಿಕಿತ್ಸೆ ಬೇಕು: ಮೊಯಿಲಿ
‘ಕಾಂಗ್ರೆಸ್‌ ಪಕ್ಷಕ್ಕೆ ಬಹುದೊಡ್ಡ ‘ಶಸ್ತ್ರ ಚಿಕಿತ್ಸೆ’ ಬೇಕಾಗಿದ್ದು, ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರಾಹುಲ್‌ ಗಾಂಧಿ ಅವರೇ ಈ ಕೆಲಸವನ್ನು ಮಾಡಬೇಕು’ ಎಂದು ಮೊಯಿಲಿ ಹೇಳಿದರು.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್‌ನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಪಕ್ಷದೊಳಗೆ ಪ್ರತಿ ಹಂತದಲ್ಲೂ ಆಂತರಿಕ ಚುನಾವಣೆಗಳನ್ನು ನಡೆಸುವ ಮೂಲಕ ಹೊಸಬರ ಪ್ರವೇಶಕ್ಕೆ ಅವಕಾಶ ಕೊಡಬೇಕು. ಆಂತರಿಕ ಕಲಹಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲಿಗೆ ಚುನಾವಣೆಯ ಉಸ್ತುವಾರಿ ವಹಿಸಿದ್ದವರು ಮತ್ತು ಆಯಾ ರಾಜ್ಯ ಘಟಕಗಳ ಮುಖ್ಯಸ್ಥರನ್ನು ಹೊಣೆಯಾಗಿಸಬೇಕೇ ವಿನಾ ಪಕ್ಷದ ಅಧ್ಯಕ್ಷರನ್ನಲ್ಲ ಎಂದರು.

‘2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಆ ನಂತರ ಹತ್ತು ವರ್ಷಗಳ ಕಾಲ ಅದು ಅಧಿಕಾರದಿಂದ ದೂರ ಇರಬೇಕಾಯಿತು. ಆದರೆ ಅವರು ಹೋರಾಟ ಮುಂದುವರಿಸಿ 2014ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಹತ್ತು ವರ್ಷ ದೀರ್ಘ ಕಾಲವೇನೂ ಅಲ್ಲ ಎಂದರು.

ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್‌ ಅವರ, ‘ಕಾಂಗ್ರೆಸ್‌ ಸಾಯಬೇಕು’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೊಯಿಲಿ, ‘ಇತಿಹಾಸವನ್ನು ಮರೆತವರು ಮಾತ್ರ ಇಂಥ ಮಾತುಗಳನ್ನು ಆಡುತ್ತಾರೆ. ಕಾಂಗ್ರೆಸ್‌ಅನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಮತ್ತೆ ಮೇಲೆದ್ದು ಬರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.