ರಾಮದಾಸ್ ಅಠವಳೆ
ನವದೆಹಲಿ: ‘ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಸರ್ಕಾರ ಶಿಫಾರಸು ಮಾಡಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಬ್ರಿಜೇಶ್ ಚೌಟ ಅವರ ಪ್ರಶ್ನೆಗೆ ಒದಗಿಸಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
‘ಯಾವುದೇ ಸಮುದಾಯವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಅಥವಾ ಪಟ್ಟಿಯಿಂದ ತೆಗೆಯುವುದಕ್ಕೆ ಹಾಗೂ ಮಾರ್ಪಾಡು ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕು. ಸಂಬಂಧಪಟ್ಟ ಜಾತಿಯ ಕುರಿತು ಕೈಗೊಂಡ ಅಧ್ಯಯನದ ವರದಿಯೊಂದಿಗೆ ಸಮಗ್ರ ಪ್ರಸ್ತಾವ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.
ಮಂಜೂರು: ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ’(ಎಸ್‌ಎಎಸ್‌ಸಿಐ) ಅಡಿ, ಕರ್ನಾಟಕಕ್ಕೆ 2022–23ರಲ್ಲಿ 25 ಹಾಗೂ 2023–24ನೇ ಸಾಲಿನಲ್ಲಿ 26 ಯೋಜನೆಗಳನ್ನು ಮಂಜೂರು ಮಾಡಲಾಗಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ನಾರಾಯಣ ಕೆ. ಅವರಿಗೆ ನೀಡಿರುವ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಎಸ್‌ಎಎಸ್‌ಸಿಐ ಅಡಿ ಕರ್ನಾಟಕಕ್ಕೆ 2020–21ರಿಂದ 2024–25ರ ವರೆಗೆ ₹13,331.21 ಕೋಟಿ ನೀಡಲಾಗಿದೆ. ಕರ್ನಾಟಕ ಸಲ್ಲಿಸಿರುವ ಅನುದಾನ ಬಳಕೆ ಪ್ರಮಾಣಪತ್ರದ ಪ್ರಕಾರ, ರಾಜ್ಯ ಸರ್ಕಾರವು ಕಳೆದ ಮಾರ್ಚ್ 31ರವರೆಗೆ ₹12,710.66 ಕೋಟಿ ಖರ್ಚು ಮಾಡಿದೆ ಎಂದು ತಿಳಿಸಿದ್ಧಾರೆ.
‘750 ಎಲೆಕ್ಟ್ರಿಕ್ ಬಸ್ ಮಂಜೂರು’
‘ಪಿಎಂ ಎಲೆಕ್ಟ್ರಿಕ್ ಬಸ್ ಸೇವಾ ಯೋಜನೆ’ ಅಡಿ ಕರ್ನಾಟಕದ 10 ನಗರಗಳಿಗೆ ಒಟ್ಟು 750 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಲಾಗಿದೆ’ ಎಂದು ವಸತಿ ಮತ್ತು ನಗಾರಭಿವೃದ್ಧಿ ಖಾತೆ ರಾಜ್ಯ ಸಚಿವ ತೋಖನ್ ಸಾಹು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ. ಬೆಳಗಾವಿ ಹುಬ್ಬಳ್ಳಿ–ಧಾರವಾಡ ಕಲಬುರಗಿ ಮಂಗಳೂರು ಮತ್ತು ಮೈಸೂರು ನಗರಗಳಿಗೆ ತಲಾ 100 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಬಳ್ಳಾರಿ ವಿಜಯಪುರ ದಾವಣಗೆರೆ ಶಿವಮೊಗ್ಗ ಹಾಗೂ ತುಮಕೂರು ನಗರಗಳಿಗೆ ತಲಾ 50 ಬಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಉತ್ತೇಜಿಸುವುದಕ್ಕಾಗಿ 2023ರ ಆಗಸ್ಟ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.