ಮುಂಬೈ: 1 ರಿಂದ 5ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದ್ದ ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್ ನೇತೃತ್ವದ ಮಹಾಯುತಿ ಸರ್ಕಾರವು ಹಿಂದೆ ಸರಿಯಲು ನಿರ್ಧರಿಸಿದೆ.
ಮರಾಠಿ, ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಐಚ್ಛಿಕವಾಗಿಸಿದೆ.
‘ನೂತನ ಶಿಕ್ಷಣ ನೀತಿ–2020’ರ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ಕಲಿಕೆ ವಿಚಾರವು ಮಹಾರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿದೆ. ಎನ್ಇಪಿ ಜಾರಿ ಮಾಡಿದ ‘ಮಹಾಯುತಿ’ ಸರ್ಕಾರದ ವಿರುದ್ಧ ‘ಮಹಾ ವಿಕಾಸ ಆಘಾಡಿ’ ಸಹ ಕಿಡಿಕಾರಿತ್ತು. ಇದರ ಬೆನ್ನಲ್ಲೇ, ಈ ನಿರ್ಧಾರ ತೆಗೆದುಕೊಂಡಿದೆ.
‘ಹಿಂದಿ ಕಲಿಕೆ ಕಡ್ಡಾಯವಲ್ಲ. ಎನ್‌ಇಪಿ ಪ್ರಕಾರ, ತ್ರಿಭಾಷಾ ಸೂತ್ರದಡಿ ಹಿಂದಿ ಕಲಿಕೆಯು ಐಚ್ಛಿಕವಾಗಿರಲಿದೆ’ ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾಜಿ ಭುಸೆ ತಿಳಿಸಿದ್ದಾರೆ.
‘ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ, ಮೂರನೇ ಭಾಷೆಯಾಗಿ ಯಾವುದನ್ನಾದರೂ ಅವರೇ ಆಯ್ಕೆ ಮಾಡಿಕೊಳ್ಳಬಹುದು’ ಎಂದು ರಾಜ್ಯ ಕೈಗಾರಿಕಾ ಸಚಿವ ಉದಯ್ ಸಾಮಂತ್ ತಿಳಿಸಿದರು.
‘ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲು ಅವಕಾಶ ನೀಡುವುದಿಲ್ಲ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಹಾಗೂ ಶಿವಸೇನೆ (ಉದ್ಧವ್ ಬಣ)ದ ಅಧ್ಯಕ್ಷ ಉದ್ಧವ್ ಠಾಕ್ರೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.