ADVERTISEMENT

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ RPN ಸಿಂಗ್, ತ್ರಿವೇದಿ

ಪಿಟಿಐ
Published 11 ಫೆಬ್ರುವರಿ 2024, 16:09 IST
Last Updated 11 ಫೆಬ್ರುವರಿ 2024, 16:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ : ರಾಜ್ಯಸಭಾ ಚುನಾವಣೆಗೆ ಬಿಜೆಪಿ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರದ ಮಾಜಿ ಸಚಿವ ಆರ್‌.ಪಿ.ಎನ್. ಸಿಂಗ್, ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಇದೆ.

ರಾಜ್ಯಸಭೆಯ ಹಾಲಿ ಸದಸ್ಯ ಸುಧಾಂಶು ತ್ರಿವೇದಿ ಅವರನ್ನು ಪಕ್ಷವು ಮತ್ತೆ ಕಣಕ್ಕೆ ಇಳಿಸುತ್ತಿದೆ. ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಕೇಂದ್ರ ಸಚಿವರಲ್ಲಿ ಯಾರೊಬ್ಬರ ಹೆಸರೂ ಪಟ್ಟಿಯಲ್ಲಿ ಇಲ್ಲ. ಇವರಲ್ಲಿ ಹೆಚ್ಚಿನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ADVERTISEMENT

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಪಕ್ಷದ ಮುಖ್ಯ ವಕ್ತಾರ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಅನಿಲ್ ಬಲೂನಿ ಅವರ ಹೆಸರು ಪಟ್ಟಿಯಲ್ಲಿಲ್ಲ. ಇವರಿಬ್ಬರೂ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪಕ್ಷವು ಇನ್ನೂ ಹಲವು ಅಭ್ಯರ್ಥಿಗಳ ಹೆಸರನ್ನು ಘೋಷಿಸಬೇಕಿದೆ.

ಭಾನುವಾರ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಬಿಹಾರದ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರ ಹೆಸರು ಇಲ್ಲ. ಬಿಹಾರ ವಿಧಾನಸಭೆಯಿಂದ ರಾಜ್ಯಸಭೆಗೆ ಆರು ಮಂದಿಯನ್ನು ಚುನಾಯಿಸಬೇಕಿದೆ. ಎನ್‌ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟವು ತಲಾ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿ(ಯು) ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ. ಬಿಜೆಪಿಯು ಕಣಕ್ಕೆ ಇಳಿಸುತ್ತಿರುವ ಆರ್‌.ಪಿ.ಎನ್. ಸಿಂಗ್ ಅವರು ರಾಜಕೀಯವಾಗಿ ಪ್ರಬಲವಾಗಿರುವ ಕುರ್ಮಿ ಸಮುದಾಯಕ್ಕೆ ಸೇರಿದವರು. ಇವರು ಬಿಜೆಪಿ ಸೇರುವ ಮೊದಲು ಕಾಂಗ್ರೆಸ್ಸಿನಲ್ಲಿ ಇದ್ದರು. 

ಬಿಜೆಪಿಯ ಹರಿಯಾಣ ಘಟಕದ ಮಾಜಿ ಅಧ್ಯಕ್ಷ ಸುಭಾಷ್ ಬರಾಲಾ ಅವರು ಆ ರಾಜ್ಯದಿಂದ ಅಭ್ಯರ್ಥಿಯಾಗಿದ್ದಾರೆ. 15 ರಾಜ್ಯಗಳ ವಿಧಾನಸಭೆಗಳಿಂದ ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ಫೆಬ್ರುವರಿ 27ಕ್ಕೆ ಮತದಾನ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.