ADVERTISEMENT

ರಾಜ್ಯಸಭೆ: ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ (ತಿದ್ದುಪಡಿ) ಮಸೂದೆ ಅಂಗೀಕಾರ

ಪಿಟಿಐ
Published 8 ಫೆಬ್ರುವರಿ 2021, 16:48 IST
Last Updated 8 ಫೆಬ್ರುವರಿ 2021, 16:48 IST
ರಾಜ್ಯಸಭಾ
ರಾಜ್ಯಸಭಾ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಡರ್ ನ ನಾಗರಿಕ ಸೇವಾ ಅಧಿಕಾರಿಗಳನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್‌ನೊಂದಿಗೆ ವಿಲೀನಗೊಳಿಸುವ ಸುಗ್ರೀವಾಜ್ಞೆ ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ (ತಿದ್ದುಪಡಿ) ಮಸೂದೆ 2021 ಅನ್ನು ರಾಜ್ಯಸಭೆಯು ಸೋಮವಾರ ಅಂಗೀಕರಿಸಿದೆ.

ಕಳೆದ ವಾರ ಸಂಸತ್ತಿನ ಮೇಲ್ಮನೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದ್ದು, ಚರ್ಚೆಯ ಬಳಿಕ ಇಂದು ರಾಜ್ಯಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರ ಮುಂದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಒಂದು ರಾಷ್ಟ್ರ ಒಂದು ಸಂವಿಧಾನದಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಏಕೀಕರಣ ಮತ್ತು ಸಮಗ್ರ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಪ್ರತಿ ಹಂತದಲ್ಲೂ ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಈ ಮಸೂದೆಯ ತಿದ್ದುಪಡಿಯ ಮೂಲಕ, ಜಮ್ಮು ಮತ್ತು ಕಾಶ್ಮೀರದ ಕೇಡರ್ ಅನ್ನು ಎಜಿಎಂಯುಟಿ ಕೇಡರ್‌ನೊಂದಿಗೆ ವಿಲೀನಗೊಳಿಸುವ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ರಾಜ್ಯಸಭೆಯಲ್ಲಿ ಹೇಳಿದರು.

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಭಾರತದ ಸಂವಿಧಾನವು ಸಂಪೂರ್ಣವಾಗಿ ಅನ್ವಯವಾಗುತ್ತಿದೆ ಮತ್ತು ಈ ಮಸೂದೆಯ ಮೂಲಕ ಕೇಂದ್ರಾಡಳಿತ ಪ್ರದೇಶದ ಆಡಳಿತ ನಡೆಸುವ ಅನುಭವ ಹೊಂದಿರುವ ಅಧಿಕಾರಿಗಳ ಲಭ್ಯತೆಯನ್ನು ಶಕ್ತಗೊಳಿಸುತ್ತದೆ ಎಂದು ಹೇಳಿದರು.

'ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 170 ಕೇಂದ್ರ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾನೂನುಗಳನ್ನು ಸುಗಮವಾಗಿ ಅನುಷ್ಠಾನಗೊಳಿಸಲು, ಯೋಜನೆಗಳ ಅನ್ವಯಿಕ ಮತ್ತು ಯೋಜನೆಗಳ ಪರಿಣಾಮಕಾರಿ ಕಾರ್ಯಗತಗೊಳಿಸಲು ಮತ್ತು ಕೇಡರ್‌ನ ಉತ್ತಮ ಶಕ್ತಿಗಾಗಿ,ಕೇಂದ್ರಾಡಳಿತ ಪ್ರದೇಶದ ಆಡಳಿತದ ಅನುಭವ ಹೊಂದಿರುವ ಅಧಿಕಾರಿಗಳು ಬಹಳ ಮುಖ್ಯವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಕೇಡರ್ ಅನ್ನು ಎಜಿಎಂಯುಟಿ ಕೇಡರ್‌ನೊಂದಿಗೆ ವಿಲೀನಗೊಳಿಸುವ ಮೂಲಕ, ಎಜಿಎಂಯುಟಿ ಕೇಡರ್‌ನ ಐಎಎಸ್ ಅಧಿಕಾರಿಗಳ ಸೇವೆಗಳನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ತೆಗೆದುಕೊಳ್ಳಬಹುದು' ಎಂದು ರೆಡ್ಡಿ ಹೇಳಿದರು.

ಈ ಮಸೂದೆಯನ್ನು ವಿರೋಧಿಸಿ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಬಹುಶಃ ಇದು ಸದನದಲ್ಲಿ ನನ್ನ ಕೊನೆಯ ಭಾಷಣ ಮತ್ತು ಕಠಿಣ ಭಾಷೆಯನ್ನು ಬಳಸುವುದನ್ನು ನಾನು ಬಯಸುವುದಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ಯುಟಿಯಾಗಿ ಪರಿವರ್ತಿಸುವ ಹಿಂದಿನ ಸರ್ಕಾರದ ಭರವಸೆಗಳಿಗೆ ವಿರುದ್ಧವಾಗಿ, ಅಭಿವೃದ್ಧಿ ಸ್ಥಗಿತಗೊಂಡಿದೆ. ಉದ್ಯಮಗಳು ಈ ಪ್ರದೇಶವನ್ನು ಪ್ರವೇಶಿಸಲು ಇನ್ನೂ ಸಾಧ್ಯವಾಗಲಿಲ್ಲ ಮತ್ತು ನಿರುದ್ಯೋಗ ಹೆಚ್ಚುತ್ತಿದೆ ಎಂದು ದೂರಿದರು.

ಆಜಾದ್ ಅವರ ರಾಜ್ಯಸಭಾ ಅಧಿಕಾರಾವಧಿ ಫೆಬ್ರವರಿ 15ಕ್ಕೆ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.