ADVERTISEMENT

ಶಬರಿಮಲೆ ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧ: ಸಚಿವ ಮಹೇಶ ಶರ್ಮಾ

ಪಿಟಿಐ
Published 14 ನವೆಂಬರ್ 2018, 19:57 IST
Last Updated 14 ನವೆಂಬರ್ 2018, 19:57 IST
   

ನವದೆಹಲಿ:‘ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ದೇವಸ್ಥಾನದ ವಿವಾದವನ್ನು ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಸಮಗ್ರ ದೃಷ್ಟಿಯಿಂದ ನೋಡಬೇಕು. ಅಗತ್ಯಬಿದ್ದರೆ ಸೂಕ್ತ ಸಮಯದಲ್ಲಿ ಕೇಂದ್ರ ಮಧ್ಯಪ್ರವೇಶಿಸಲಿದೆ’ ಎಂದು ಸಂಸ್ಕೃತಿ ಸಚಿವ ಮಹೇಶ ಶರ್ಮಾ ಹೇಳಿದರು.

ಈ ವಿವಾದ ಬಗೆಹರಿಸಲು ಸುಗ್ರೀವಾಜ್ಞೆ ಅಗತ್ಯವಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಕುರಿತು ನಿರ್ಧಾರ ತೆಗೆದುಕೊಂಡರೆ ಆಗ ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುತ್ತದೆ’ ಎಂದರು.

ಋತುಸ್ರಾವ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆದೇವಸ್ಥಾನ ಅಪವಿತ್ರವಾಗುತ್ತದೆಯೇ ಎಂಬುದಕ್ಕೆ, ‘ಈ ವಿಷಯ ನ್ಯಾಯಾಲಯದಲ್ಲಿರುವುದಿಂದ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದರು.

ADVERTISEMENT

ಶಬರಿಮಲೆ ಕ್ಷೇತ್ರಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 28ರಂದು ತೀರ್ಪು ನೀಡಿತ್ತು. ಇದು ಕೇರಳದಲ್ಲಿ ತೀವ್ರ ಪ್ರತಿಭಟನೆಗೆ ಕಾಣವಾಗಿತ್ತು. ಈ ತೀರ್ಪನ್ನು ಪುನರ್‌ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಗೆ ನೀಡಿದೆ.ಆದರೆ, ಸೆ. 28ರ ತೀರ್ಪಿಗೆ ತಡೆ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಮಂಡಲ ಮಕರವಿಳಕ್ಕು ಅಂಗವಾಗಿ ವಾರ್ಷಿಕ ಪೂಜಾ ಕಾರ್ಯಗಳು ನಡೆಯಲಿದ್ದು, ಅದಕ್ಕಾಗಿ ಇದೇ ನವೆಂಬರ್‌ 17ಕ್ಕೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಬರಲಿದ್ದಾರೆ.

17ರಂದು ಅಯ್ಯಪ್ಪ ಸನ್ನಿಧಿಗೆ ತೃಪ್ತಿ ದೇಸಾಯಿ

ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಆರು ಮಂದಿ ಮಹಿಳೆಯರ ಜೊತೆಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಶನಿವಾರ (ಇದೇ 17) ಪ್ರವೇಶಿಸುವುದಾಗಿ ಬುಧವಾರ ತಿಳಿಸಿದ್ದಾರೆ.

ಮಂಡಳ–ಮಕರವಿಳಕ್ಕು ಪೂಜೆಗಾಗಿ ಶನಿವಾರ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.

ಶನಿ ಶಿಂಗ್ಣಾಪುರ ದೇವಸ್ಥಾನ, ಹಾಜಿ ಅಲಿ ದರ್ಗಾ, ಮಹಾಲಕ್ಷ್ಮೀ ದೇವಸ್ಥಾನ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶಕ್ಕಾಗಿ ನಡೆದ ಹೋರಾಟದ ಮಂಚೂಣಿಯಲ್ಲಿದ್ದ ತೃಪ್ತಿ ದೇಸಾಯಿ, ಶಬರಿಮಲೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಮೇಲೆ ದಾಳಿ ನಡೆಯಬಹುದು. ಅದಕ್ಕಾಗಿ ಸೂಕ್ತ ಭದ್ರತೆ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ– ಮೇಲ್‌ ಕಳುಹಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ದೇವಸ್ಥಾನ ಪ್ರವೇಶಕ್ಕೆ ಯಾವುದೇ ಅಡೆತಡೆ ಆಗದಂತೆ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರ ಹಾಗೂ ಪೊಲೀಸರ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿದ್ದು, ದೇವರ ದರ್ಶನವಿಲ್ಲದೇ ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ.

‘ಮೇಲ್‌ ತಲುಪಿದ್ದು, ಸೂಕ್ರ ಕ್ರಮಕ್ಕಾಗಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

‘ಗಾಂಧಿ ತತ್ವದ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ದೇಸಾಯಿ ಹಾಗೂ ಅವರ ಜೊತೆಗೆ ಬರುವ ಮಹಿಳೆಯರಿಗೆ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ದೇವಸ್ಥಾನದ ಮೆಟ್ಟಿಲುಗಳ ಮೇಲೆ ಮಲಗಿ ಪ್ರತಿಭಟಿಸುತ್ತೇವೆ’ ಎಂದು ಅಯ್ಯಪ್ಪ ಧರ್ಮ ಸೇನಾ ಅಧ್ಯಕ್ಷ ರಾಹುಲ್‌ ಈಶ್ವರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.