ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದೊಳಗೆ ಮಹಿಳೆಯರ ಪ್ರವೇಶ ಕುರಿತಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಮಲಯಾಳ ನಟ ತುಳಸೀಧರನ್ ನಾಯರ್ (ಕೊಲ್ಲಂ ತುಳಸಿ) ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ.
ಮಹಿಳೆಯರನ್ನು ಅವಮಾನಿಸಿದ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ನ್ಯಾಯಾಂಗ ನಿಂದನೆ ಮಾಡಿದ ಆರೋಪದ ಮೇಲೆ ಕೊಲ್ಲಂ ಜಿಲ್ಲೆಯ ಚೆವಾರ ಠಾಣೆಯ ಪೊಲೀಸರು ನಾಯರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಬಂಧನ ಭೀತಿಯಲ್ಲಿದ್ದ ಕೊಲ್ಲಂ ತುಳಸಿ ನಿರೀಕ್ಷಣಾ ಜಾಮೀನಿಗಾಗಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು.
ಬಿಜೆಪಿ ಬೆಂಬಲಿಗರಾಗಿರುವ ಕೊಲ್ಲಂ ತುಳಸಿ, ಕಳೆದ ಅಕ್ಟೋಬರ್ 12ರಂದು ಸಾರ್ವಜನಿಕ ಸಭೆಯಲ್ಲಿ, ‘ಶಬರಿಮಲೆ ದೇಗುಲ ಪ್ರವೇಶಿಸುವ ಋತುಸ್ರಾವ ವಯಸ್ಸಿನ ಮಹಿಳೆಯರ ದೇಹವನ್ನು ಎರಡು ತುಂಡು ಮಾಡಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಗೆ ಮತ್ತು ಸುಪ್ರೀಂ ಕೋರ್ಟ್‌ಗೆ ಪಾರ್ಸಲ್ ಮಾಡಬೇಕು’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.