ADVERTISEMENT

ಶಬರಿಗಿರಿ: ಮುಕ್ತಪ್ರವೇಶಕ್ಕೆ ಇನ್ನೂ ಸಮಯ ಬೇಕು

ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಮೂಲಸೌಕರ್ಯ ಕೊರತೆ: ಅರ್ಜಿಯಲ್ಲಿ ಟಿಡಿಬಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST
ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರತಿಭಟನಕಾರರನ್ನು ಪೊಲೀಸರು ತಡೆದರು(ಚಿತ್ರ:1) ಕೇಂದ್ರ ಸಚಿವ ಅಲ್ಫೋನ್ಸ್‌ ಕಣ್ಣಂತಾನಂ ಸೋಮವಾರ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು (ಚಿತ್ರ:2) ಇರುಮುಡಿ ಹೊತ್ತ ಹಿಂದೂ ಐಕ್ಯ ವೇದಿ ಮುಖ್ಯಸ್ಥೆ ಕೆ.ಪಿ. ಶಶಿಕಲಾ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲು ಏರಿದರು (ಚಿತ್ರ:2) –ಪಿಟಿಐ ಚಿತ್ರ
ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರತಿಭಟನಕಾರರನ್ನು ಪೊಲೀಸರು ತಡೆದರು(ಚಿತ್ರ:1) ಕೇಂದ್ರ ಸಚಿವ ಅಲ್ಫೋನ್ಸ್‌ ಕಣ್ಣಂತಾನಂ ಸೋಮವಾರ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು (ಚಿತ್ರ:2) ಇರುಮುಡಿ ಹೊತ್ತ ಹಿಂದೂ ಐಕ್ಯ ವೇದಿ ಮುಖ್ಯಸ್ಥೆ ಕೆ.ಪಿ. ಶಶಿಕಲಾ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲು ಏರಿದರು (ಚಿತ್ರ:2) –ಪಿಟಿಐ ಚಿತ್ರ   

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲದೊಳಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವಂತೆ ಸೆ.28ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಷ್ಠಾನಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕಾಲಾವಕಾಶ ಕೋರಿದೆ.

ಈ ಸಂಬಂಧ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಟಿಡಿಬಿ, ತೀರ್ಪು ಅನುಷ್ಠಾನಕ್ಕೆ ಮೂಲಸೌಕರ್ಯಗಳ ಕೊರತೆಯ ಕಾರಣ ನೀಡಿದೆ.

ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಶಬರಿಮಲೆಯಲ್ಲಿಯ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಕೊಠಡಿಗಳಂತಹ ಮೂಲಸೌಕರ್ಯಗಳ ಕೊರತೆ ಎದುರಾಗಿದೆ ಎಂದು ಅಯ್ಯಪ್ಪ ದೇವಸ್ಥಾನದ ಆಡಳಿತ ಉಸ್ತುವಾರಿ ಹೊತ್ತಿರುವ ಟಿಡಿಬಿ ಹೇಳಿದೆ.

ADVERTISEMENT

ಮೂಲಸೌಕರ್ಯ ಕೊರತೆಯಿಂದ ಮಹಿಳಾ ಭಕ್ತರಿಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಮಧ್ಯೆ, ಶಬರಿಮಲೆಯಲ್ಲಿ ಭಾನುವಾರ ತಡರಾತ್ರಿ ಪ್ರತಿಭಟನೆ ನಡೆಸಿದ ಅಯ್ಯಪ್ಪ ಭಕ್ತರನ್ನು ಬಂಧಿಸಿರುವುದನ್ನು ಖಂಡಿಸಿ ಕೇರಳದಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.

ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ:ಶಬರಿಮಲೆಯಲ್ಲಿ 15 ಸಾವಿರ ಪೊಲೀಸರನ್ನು ನಿಯೋಜಿಸುವ ಅಗತ್ಯವೇನಿತ್ತು ಎಂದು ಕೇರಳ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಯ್ಯಪ್ಪ ಸನ್ನಿಧಾನದಲ್ಲಿ ಭಾನುವಾರ ರಾತ್ರಿ ನಡೆದ ಪ್ರಹಸನ ಕುರಿತು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಅಡ್ವೊಕೇಟ್‌ ಜನರಲ್‌ಗೆ ಸೂಚಿಸಿದೆ.

‘ಸುಪ್ರೀಂ ಕೋರ್ಟ್‌ ತೀರ್ಪು ಜಾರಿ ನೆಪದಲ್ಲಿ ಪೊಲೀಸರ ದೌರ್ಜನ್ಯ ಎಷ್ಟು ಸರಿ’ ಎಂದು ತರಾಟೆಗೆ ತೆಗೆದುಕೊಂಡಿದೆ. ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ಹೈಕೋರ್ಟ್ ವಿವರಣೆ ಕೋರಿದೆ.

ಕಳೆದ ತಿಂಗಳು ಶಬರಿಮಲೆಯಲ್ಲಿ ಪೊಲೀಸರು ನಡೆಸಿದ ಲಾಠಿ ಪ್ರಹಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆ
ಸಿದ ಹೈಕೋರ್ಟ್ ಪೊಲೀಸರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸದೆ ಬೇರೆ ಮಾರ್ಗ ಇರಲಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಅಸ
ಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.