ADVERTISEMENT

ಶಬರಿಮಲೆ: ಬಂದೋಬಸ್ತ್‌ನಲ್ಲಿ ತೆರೆದ ಬಾಗಿಲು

ಪಿಟಿಐ
Published 5 ನವೆಂಬರ್ 2018, 19:54 IST
Last Updated 5 ನವೆಂಬರ್ 2018, 19:54 IST
ಶಬರಿಮಲೆಯಲ್ಲಿ ಸೋಮವಾರ ಅಯ್ಯಪ್ಪನಿಗೆ ಪೂಜೆ –-ಪಿಟಿಐ ಚಿತ್ರ
ಶಬರಿಮಲೆಯಲ್ಲಿ ಸೋಮವಾರ ಅಯ್ಯಪ್ಪನಿಗೆ ಪೂಜೆ –-ಪಿಟಿಐ ಚಿತ್ರ   

ಶಬರಿಮಲೆ: ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ವಿಶೇಷ ಪೂಜೆಗಾಗಿ ಸೋಮವಾರ ಸಂಜೆ ಐದು ಗಂಟೆಗೆ ತೆರೆಯಲಾಯಿತು. ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಭಾರಿ ಪ್ರತಿರೋಧ ವ್ಯಕ್ತವಾಗಿದ್ದ ಕಾರಣ ದೇಗುಲದ ಪರಿಸರದಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಋತುಸ್ರಾವದ ವಯಸ್ಸಿನ ಮಹಿಳೆಯರು ದೇವಸ್ಥಾನದ ಸಮೀಪದಲ್ಲಿ ಕಾಣಿಸಲಿಲ್ಲ. ಆದರೆ, ಅಂಜು ಎಂಬ 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ಪಂಪಾದಲ್ಲಿರುವ ತಳ ಶಿಬಿರಕ್ಕೆ ಬಂದರು. ದೇವಸ್ಥಾನಕ್ಕೆ ಹೋಗುವುದಕ್ಕೆ ಭದ್ರತೆ ಒದಗಿಸುವಂತೆ ಅವರು ಪೊಲೀಸರನ್ನು ಕೋರಿದ್ದಾರೆ.

‘ಸದ್ಯ ಅವರು ಪೊಲೀಸ್‌ ನಿಯಂತ್ರಣ ಕೇಂದ್ರದಲ್ಲಿ ಇದ್ದಾರೆ. ಅವರನ್ನು ದೇಗುಲಕ್ಕೆ ಕರೆದೊಯ್ಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶಬರಿಗಿರಿ ಸೋಮವಾರ ಅಕ್ಷರಶಃ ಪೊಲೀಸ್‌ ಭದ್ರಕೋಟೆಯಾಗಿತ್ತು. ಕಮಾಂಡೊಗಳು ಸನ್ನದ್ಧ ಸ್ಥಿತಿಯಲ್ಲಿದ್ದರು. ನಿಗಾ ಕ್ಯಾಮೆರಾಗಳು ಮತ್ತು ಮೊಬೈಲ್‌ ಜಾಮರ್‌ಗಳನ್ನು ಅಳವಡಿಸಲಾಗಿತ್ತು.ಸಂಜೆ ಐದು ಗಂಟೆಗೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ಸಾವಿರಾರು ಭಕ್ತರು ದೇವಾಲಯ ಪ್ರವೇಶಿಸಿದರು. ಮಂಗಳವಾರ ರಾತ್ರಿ 10 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು.

ಬಿಜೆಪಿ ಪಿತೂರಿ ಆರೋಪಕ್ಕೆ ಮರುಜೀವ
ತಿರುವನಂತಪುರ:
ಋತುಸ್ರಾವದ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಿದರೆ ದೇಗುಲದ ಬಾಗಿಲು ಬಂದ್‌ ಮಾಡುವುದಾಗಿ ಮುಖ್ಯ ಅರ್ಚಕ ಕಂಟರರ್‌ ರಾಜೀವರು ಅಕ್ಟೋಬರ್‌ 19ರಂದು ಹೇಳಿಕೆ ನೀಡಿದ್ದರು. ಅವರು ಹೀಗೆ ಹೇಳಿಕೆ ನೀಡಲು ತಾವೇ ಕಾರಣ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಹೇಳಿದ್ದಾರೆ ಎಂಬ ಆರೋಪ ಹೊಸ ವಿವಾದ ಸೃಷ್ಟಿಸಿದೆ.

ಕೋಯಿಕ್ಕೋಡ್‌ನಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಪಿಳ್ಳೆ ನೀಡಿದ ಹೇಳಿಕೆಯ ವಿಡಿಯೊ ಬಹಿರಂಗವಾಗಿದೆ. ‘ವಕೀಲನಾಗಿರುವ ನಾನು ಮುಖ್ಯ ಅರ್ಚಕರಿಗೆ ಕಾನೂನು ಸಲಹೆಯನ್ನಷ್ಟೇ ಕೊಟ್ಟಿದ್ದೇನೆ’ ಎಂದು ತಮ್ಮ ಹೇಳಿಕೆಯನ್ನು ಪಿಳ್ಳೆ ಸಮರ್ಥಿಸಿಕೊಂಡಿದ್ದಾರೆ.

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪಿತೂರಿಯನ್ನು ಬಿಜೆಪಿ ಮಾಡಿದೆ ಎಂಬ ಆರೋಪಕ್ಕೆ ಪಿಳ್ಳೆ ಅವರ ಹೇಳಿಕೆ ಮರುಜೀವ ನೀಡಿದೆ. ದೇಗುಲದ ಬಾಗಿಲು ಬಂದ್‌ ಮಾಡುವುದು ಸುಪ್ರೀಂ ಕೋರ್ಟ್‌ ತೀರ್ಪಿನ ನಿಂದನೆ ಆಗುವುದಿಲ್ಲ ಎಂದು ಅರ್ಚಕರಿಗೆ ತಾವು ಹೇಳಿದ್ದಾಗಿ ಪಿಳ್ಳೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂದು ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಶಬರಿಮಲೆ ವಿವಾದವು ಬಿಜೆಪಿಗೆ ಸಿಕ್ಕ ಸುವರ್ಣ ಅವಕಾಶ. ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಕಾರ್ಯತಂತ್ರ ರೂಪಿಸುತ್ತಿರುವುದಾಗಿಯೂ ಕಾರ್ಯಕ್ರಮದಲ್ಲಿ ಪಿಳ್ಳೆ ಹೇಳಿದ್ದರು.

ಶಬರಿಮಲೆ ವಿಚಾರದಲ್ಲಿ ಬಿಜೆಪಿಯ ವಿಭಜನಕಾರಿ ಕಾರ್ಯಸೂಚಿ ಈಗ ಬಹಿರಂಗವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ‘ಅರ್ಚಕರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮೈತ್ರಿಕೂಟದಲ್ಲಿ ಅವರು ಮುಂದುವರಿಯಲಿದ್ದಾರೆಯೇ ಎಂಬುದನ್ನು ಅರ್ಚಕರೇ ಸ್ಪಷ್ಟಪಡಿಸಬೇಕು’ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.