ADVERTISEMENT

ಮೋದಿ ಕುರಿತ ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಪಿಐಎಲ್‌ ವಿಚಾರಣೆಗೆ ಸುಪ್ರೀಂ ಅಸ್ತು

ಪಿಟಿಐ
Published 30 ಜನವರಿ 2023, 6:33 IST
Last Updated 30 ಜನವರಿ 2023, 6:33 IST
   

ನವದೆಹಲಿ: 2002ರ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ಸಿ ಸಮ್ಮತಿಸಿದೆ.

ತಮ್ಮ ಅರ್ಜಿಗಳ ತುರ್ತು ವಿಚಾರಣೆಗೆ ಕೋರಿದ್ದ ವಕೀಲರಾದ ಎಂ.ಎಲ್. ಶರ್ಮಾ ಮತ್ತು ಸಿ.ಯು. ಸಿಂಗ್ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ತ್ರಿಸದಸ್ಯ ಪೀಠ ಪುರಸ್ಕರಿಸಿದೆ.

ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಜನರನ್ನು ಬಂಧಿಸುವ ಕೆಲಸ ಆಗುತ್ತಿದೆ ಎಂದು ಶರ್ಮಾ, ನ್ಯಾಯಾಲಯದ ಗಮನ ಸೆಳೆದರು.

‘ಈ ಅರ್ಜಿಗಳನ್ನು ಮುಂದಿನ ಸೋಮವಾರ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ADVERTISEMENT

ಹಿರಿಯ ಪತ್ರಕರ್ತ ಎನ್. ರಾಮ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನೂ ಹಿರಿಯ ವಕೀಲ ಸಿ.ಯು. ಸಿಂಗ್ ಪ್ರಸ್ತಾಪಿಸಿದರು.

ಕೇಂದ್ರ ಸರ್ಕಾರ ತನ್ನ ತುರ್ತು ಅಧಿಕಾರ ಬಳಸಿಕೊಂಡು ಎನ್. ರಾಮ್ ಮತ್ತು ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳನ್ನು ಅಳಿಸಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ಅಜ್ಮೀರ್‌ನ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿರುವ ಕೇಂದ್ರದ ನಿರ್ಧಾರವನ್ಕು ವಕೀಲ ಶರ್ಮಾ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಿರುವ ಅವರು, ಇದು ‘ದುಷ್ಕೃತ್ಯ, ಅಸಮಂಜಸ ಮತ್ತು ಅಸಾಂವಿಧಾನಿಕ ಕ್ರಮ’ಎಂದು ಆರೋಪಿಸಿದ್ದಾರೆ.

ಮೋದಿ ಕುರಿತಾದ ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರದ ಯೂಟ್ಯೂಬ್ ವಿಡಿಯೊ, ಲಿಂಕ್ ಹಂಚಿಕೊಂಡಿದ್ದ ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಜನವರಿ 21ರಂದು ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.