ADVERTISEMENT

ಪಾಲ್ಘರ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ಆಲಿಸಲು ಒಪ್ಪಿಗೆ

ಪಿಟಿಐ
Published 20 ಮಾರ್ಚ್ 2023, 14:00 IST
Last Updated 20 ಮಾರ್ಚ್ 2023, 14:00 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಪಾಲ್ಘರ್ ಜಿಲ್ಲೆಯಲ್ಲಿ 2020ರ ಏಪ್ರಿಲ್‌ನಲ್ಲಿ ಕಳ್ಳರೆಂದು ಭಾವಿಸಿ ಮೂವರನ್ನು ಹತ್ಯೆಗೈದ ಆರೋಪ ಕುರಿತು ತನಿಖೆ ನಡೆಸುವಂತೆ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠದ ಎದುರು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲರು, ಮಹಾರಾಷ್ಜ್ರ ಸರ್ಕಾರವೂ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಅರ್ಜಿಗಳನ್ನು ಪಟ್ಟಿ ಮಾಡಲು ಒಪ್ಪಿಗೆ ನೀಡುವ ಮುನ್ನ, ಮಹಾರಾಷ್ಟ್ರ ಸರ್ಕಾರವು ತನ್ನ ನಿಲುವು ಬದಲಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ADVERTISEMENT

‘ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಪೊಲೀಸರೊಬ್ಬರಿಗೆ ಶಿಕ್ಷೆ ವಿಧಿಸಲಾಗಿದ್ದು, ಸಿಬಿಐ ತನಿಖೆಗೆ ಕೋರಿರುವ ಅರ್ಜಿಗಳನ್ನು ವಜಾಗೊಳಿಸಬೇಕೆಂದು’ ರಾಜ್ಯ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಕೋರಿತ್ತು. ಆದರೆ, ಪೊಲೀಸರು ತನಿಖೆಯಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಹತ್ಯೆಗೀಡಾದವರ ಸಂಬಂಧಿಕರು ದೂರಿದ್ದರು.

ಕೋವಿಡ್– ಲಾಕ್‌ಡೌನ್ ವೇಳೆ ಗುಜರಾತ್‌ನ ಸೂರತ್‌ನಲ್ಲಿ ಮೃತರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮುಂಬೈನ ಕಾಂದಿವಲಿಯಿಂದ ಇಬ್ಬರು ಸಾಧುಗಳು ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗಾಡ್‌ಚಿಂಚಿಲೆ ಗ್ರಾಮದಲ್ಲಿ ಕಾರನ್ನು ತಡೆದಿದ್ದ ಗುಂಪೊಂದು, ಈ ಮೂವರನ್ನು ಕಳ್ಳರೆಂದು ಶಂಕಿಸಿ, ಪೊಲೀಸರ ಸಮ್ಮುಖದಲ್ಲೇ ದಾಳಿ ಮಾಡಿ ಹತ್ಯೆಗೈದಿತ್ತು.

ಮೃತರನ್ನು ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70), ಸುಶೀಲ್ ಗಿರಿ ಮಹಾರಾಜ್ (35) ಮತ್ತು ವಾಹನ ಚಾಲಕ ನೀಲೇಶ್ ತೇಲ್ಗಡೆ (30) ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.