ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನ ಆಗಸ್ಟ್ 3ರಂದು ‘ನೀಟ್– ಪಿಜಿ’ ಪರೀಕ್ಷೆ ನಡೆಸಲು ಅನುಮತಿ ಕೋರಿದ್ದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷೆ ಮಂಡಳಿಯ (ಎನ್‌ಬಿಇಎಂಎಸ್) ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ಸೂಚಿಸಿದೆ.
ಮೇ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದಂತೆ ಒಂದೇ ಪಾಳಿಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷೆ ನಡೆಸುವುದಾಗಿ ಎನ್‌ಬಿಎ ಮನವಿಯಲ್ಲಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರ ಪೀಠ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ಆರಂಭದಲ್ಲಿ ಪರೀಕ್ಷೆ ನಡೆಸಲು ಎರಡು ತಿಂಗಳ ಕಾಲಾವಕಾಶ ಏಕೆ ಬೇಕು ಎಂದು ಪೀಠ ಪ್ರಶ್ನಿಸಿತು. ಬಳಿಕ ಎನ್‌ಬಿಎ ಪರ ವಕೀಲರು ನೀಡಿದ ಕಾರಣಗಳನ್ನು ಗಮನಿಸಿದ ಪೀಠ, ಅನುಮತಿ ನೀಡಿತು. ಆದರೆ, ಇದಕ್ಕಿಂತ ಹೆಚ್ಚಿನ ಸಮಯಾವಕಾಶ ನೀಡಲಾಗುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.
‘ಸುಮಾರು 2.50 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಅವರಿಗೆ ಏಕಕಾಲದಲ್ಲಿ ಪರೀಕ್ಷೆ ನಡೆಸಲು ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಗುರುತಿಸಬೇಕಿದೆ. ಅಲ್ಲದೆ, ಪಾರದರ್ಶಕತೆ, ಸುರಕ್ಷತೆ ಮತ್ತು ಭದ್ರತಾ ವಿಷಯಗಳನ್ನು ಗಮನಿಸಬೇಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರವಹಿಸಬೇಕಿದೆ. ತಾಂತ್ರಿಕ ಅಂಶಗಳನ್ನು ಪರಿಗಣಿಸಬೇಕಿದೆ. ಹೀಗಾಗಿ ಎರಡು ತಿಂಗಳು ಸಮಯ ಬೇಕಿದೆ’ ಎಂದು ಮಂಡಳಿ ಅರ್ಜಿಯಲ್ಲಿ ಕೋರಿತ್ತು.
ಮೇ 30ರಂದು ವಿಚಾರಣೆ ನಡೆಸಿದ್ದ ಪೀಠ, ಜೂನ್ 15ರಂದು ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿತ್ತು. ಅಲ್ಲದೆ ಪರೀಕ್ಷೆ ಸಂಪೂರ್ಣ ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸಬೇಕು ಎಂದೂ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.