ADVERTISEMENT

ದೆಹಲಿಯಲ್ಲಿ ಹೊಂಜು ಆವರಿಸದಂತೆ ನಿಗಾವಹಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ಪಿಟಿಐ
Published 6 ನವೆಂಬರ್ 2020, 15:30 IST
Last Updated 6 ನವೆಂಬರ್ 2020, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ(ಎನ್‌ಸಿಆರ್‌) ಹೊಗೆಮಂಜು(ಹೊಂಜು) ವಾತಾವರಣ ಸೃಷ್ಟಿಯಾಗದಂತೆ ನಿಗಾವಹಿಸಿ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

‘ದೆಹಲಿಯಲ್ಲಿ ವಾಯುಗುಣಮಟ್ಟ ನಿರ್ವಹಣೆ ಆಯೋಗವು(ಎಕ್ಯೂಎಂ) ಶುಕ್ರವಾರದಿಂದ ಕಾರ್ಯಾರಂಭಿಸಲಿದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿತು. ಇದರ ಬೆನ್ನಲ್ಲೇ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣಿಯನ್‌ ಅವರಿದ್ದ ಪೀಠವು ಈ ಕೇಂದ್ರಕ್ಕೆ ಈ ನಿರ್ದೇಶನ ನೀಡಿದೆ.

‘ಶುಕ್ರವಾರದಿಂದ ಆಯೋಗವು ಕಾರ್ಯಾರಂಭಿಸಿದ್ದು, ಇದಕ್ಕೆ ಸದಸ್ಯರನ್ನು ಸರ್ಕಾರವು ನೇಮಿಸಿದೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಆಯೋಗದ ರಚನೆ ಬಗ್ಗೆ ನಮಗೆ ಮಾಹಿತಿ ಬೇಕಿಲ್ಲ. ಇಂಥ ಹಲವು ಆಯೋಗಗಳು, ತಜ್ಞರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಹೊಂಜಿನ ವಾತಾವರಣ ಸೃಷ್ಟಿಯಾಗದಂತೆ ಖಾತ್ರಿಪಡಿಸಿ’ ಎಂದು ತಿಳಿಸಿತು. ಇದೇ ವೇಳೆ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ದೀಪಾವಳಿ ರಜೆಯ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿತು.

ADVERTISEMENT

ಗಾಳಿಯ ಗುಣಮಟ್ಟ ಕುಸಿತ: ದೆಹಲಿಯಲ್ಲಿ ಶುಕ್ರವಾರ ವಾಯುಗುಣಮಟ್ಟ ಕಳಪೆಯಾಗಿದ್ದು, ಇದು ಮುಂದಿನ 24ಗಂಟೆಗಳಲ್ಲಿ ಸುಧಾರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ ತಿಂಗಳಿಗೆ ಹೋಲಿಸಿದರೆಗುರುವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿತ್ತು. ಇದಕ್ಕೆ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವೂ ಕಾರಣವಾಗಿದೆ. ಈ ವರ್ಷ ಗಾಳಿಯ ಗುಣಮಟ್ಟ ಕುಸಿಯಲು ಕೃಷಿ ತ್ಯಾಜ್ಯ ಸುಡುವಿಕೆಯ ಶೇ 42ರಷ್ಟು ಮಾಲಿನ್ಯವೂ ಸೇರಿಕೊಂಡಿದೆ.

ಪ್ರತಿಕೂಲವಾದ ಹವಾಮಾನ - ಶಾಂತ ಗಾಳಿ ಮತ್ತು ಕಡಿಮೆ ತಾಪಮಾನ - ಮತ್ತು ನೆರೆಯ ರಾಜ್ಯಗಳಲ್ಲಿನ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಹೊಗೆಯು ಗಾಳಿಯ ಗುಣಮಟ್ಟ ಕುಸಿಯುವಂತೆ ಮಾಡಿದೆ. ಈ ವರ್ಷ ಜನವರಿ ನಂತರ ಮೊದಲ ಬಾರಿಗೆ ದೆಹಲಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಇಷ್ಟು ಕುಸಿತ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.