ವಿನಯ ಕುಲಕರ್ಣಿ
ನವದೆಹಲಿ: ಬಿಜೆಪಿ ಮುಖಂಡ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರಿಗೆ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
‘ಪ್ರಕರಣದ ಸಾಕ್ಷಿಗಳನ್ನು ಸಂಪರ್ಕಿಸಲು ಹಾಗೂ ಅವರ ಮೇಲೆ ಪ್ರಭಾವ ಬೀರಲು ವಿನಯ ಕುಲಕರ್ಣಿ ಹಾಗೂ ಮತ್ತೊಬ್ಬ ಆರೋಪಿ ಪ್ರಯತ್ನಿಸಿದ್ದಾರೆ. ಇದು, ಷರತ್ತುಗಳ ಉಲ್ಲಂಘನೆಯಾಗಿರುವ ಕಾರಣ ಜಾಮೀನನ್ನು ರದ್ದುಪಡಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಹಾಗೂ ಸತೀಶಚಂದ್ರ ಶರ್ಮಾ ಅವರು ಇದ್ದ ಪೀಠ, ಒಂದು ವಾರದ ಒಳಗಾಗಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ವಿನಯ ಕುಲಕರ್ಣಿ ಅವರಿಗೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರೂ ಕೂಡ ವಿಚಾರಣಾ ನ್ಯಾಯಾಲಯವು ಜಾಮೀನನ್ನು ರದ್ದುಪಡಿಸಬಹುದು ಎಂದೂ ಪೀಠ ಹೇಳಿದೆ.
2016ರ ಮೇ ತಿಂಗಳಲ್ಲಿ ಯೋಗೇಶ್ ಗೌಡ ಗೌಡರ ಅವರ ಕೊಲೆ ನಡೆದಿತ್ತು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಅಡಿಯಲ್ಲಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಾ ಅವರಿಗೆ ನೀಡಿದ್ದ ಜಾಮೀನನ್ನು ವಿಚಾರಣಾ ನ್ಯಾಯಾಲಯ ರದ್ದುಗೊಳಿಸಿತ್ತು. ಆದರೆ ವಿನಯ ಕುಲಕರ್ಣಿ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಲು ನಿರಾಕರಿಸಿತ್ತು. ವಿನಯ 2021ರ ಆಗಸ್ಟ್ 11ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ.
‘ಆರೋಪಿಯು ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎನ್ನುವ ಆರೋಪಗಳನ್ನು ಪುಷ್ಟೀಕರಿಸುವ ಬಲವಾದ ಸಾಕ್ಷ್ಯಗಳಿವೆ’ ಎಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿರುವ ಆದೇಶದಲ್ಲಿ ಹೇಳಿದೆ.
ತಾನು ಹೊರಡಿಸಿರುವ ಆದೇಶದಲ್ಲಿನ ಅಂಶಗಳಿಂದ ಯಾವುದೇ ರೀತಿಯಲ್ಲೂ ಪ್ರಭಾವಿತವಾಗದೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.