ADVERTISEMENT

ಜೋಶಿಮಠ ಬಿಕ್ಕಟ್ಟು: ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ಉತ್ತರಾಖಂಡ ಹೈಕೋರ್ಟ್‌ ಮೊರೆ ಹೋಗಲು ಅರ್ಜಿದಾರರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:14 IST
Last Updated 16 ಜನವರಿ 2023, 14:14 IST
   

ನವದೆಹಲಿ/ಶಿಮ್ಲಾ: ಉತ್ತರಾಖಂಡದ ಭೂಕುಸಿತ ಪೀಡಿತ ಪಟ್ಟಣ ಜೋಶಿಮಠದ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ನ್ಯಾಯಾಂಗ ಮಧ್ಯಪ್ರವೇಶಿಶಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ವಿಶಾಲ ವ್ಯಾಪ್ತಿಯ ಸಮಸ್ಯೆಗಳಿರುವ ಈ ಅರ್ಜಿ ಹೈಕೋರ್ಟ್‌ ವ್ಯಾಪ್ತಿಯಲ್ಲಿದ್ದು, ಅಲ್ಲಿಯೇ ವಿಚಾರಣೆ ಆಗಬೇಕಿರುವುದು ಸರಿಯಾದ ಕ್ರಮ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿರುವ ತ್ರಿಸದಸ್ಯ ಪೀಠ ಹೇಳಿತು.

ಅರ್ಜಿದಾರರ ಪರ ವಕೀಲರು ಜೋಶಿಮಠದ ಜನರು ಸಾಯುತ್ತಿದ್ದಾರೆ ಎಂದಾಗ, ‘ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುವ ರೀತಿ ಅಂತಹ ಪದಗಳನ್ನು ವಿಚಾರಣಾ ಪ್ರಕ್ರಿಯೆಯಲ್ಲಿ ಬಳಸಬಾರದು’ ಎಂದು ಪೀಠವು ತಾಕೀತು ಮಾಡಿತು.

ADVERTISEMENT

ಅರ್ಜಿದಾರರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ತಮ್ಮ ಅರ್ಜಿಯನ್ನು ಉತ್ತರಾಖಂಡದ ಹೈಕೋರ್ಟ್‌ನಲ್ಲಿ ಸಲ್ಲಿಸಲು ಪೀಠವು ಸೂಚಿಸಿ, ಅನುಮತಿಸಿತು.

ಅಪಾಯ ವಲಯಗಳ ವರದಿಗೆ ಸುಖ್ಖು ಸೂಚನೆ:

ಜೋಶಿಮಠದ ಭೂಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖ್ಖು ಅವರು ತಮ್ಮ ರಾಜ್ಯದಲ್ಲಿ ಭೂಕುಸಿತಗಳು ಮತ್ತು ಮುಳುಗುವ ಅಪಾಯವಿರುವ ವಲಯಗಳ ಸಮಗ್ರ ವರದಿ ಸಿದ್ಧಪಡಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಸೋಮವಾರ ನಿರ್ದೇಶನ ನೀಡಿದರು.

ಇಲ್ಲಿ ನಡೆದ ಉನ್ನತ ಮಟ್ಟದ ವಿಪತ್ತು ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿದ್ದ ಸುಖ್ಖು, ಚಂಬಾ, ಕಾಂಗ್ರಢ, ಕುಲ್ಲು ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಭೂಕಂಪಗಳಿಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಲು ಇಲಾಖೆಗೆ ಸೂಚಿಸಿದರು.

ವಿಪತ್ತುಗಳನ್ನು ತಗ್ಗಿಸಲು ಮತ್ತು ವಿಪತ್ತುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ವಿಕೋಪಗಳ ಮುನ್ನೆಚ್ಚರಿಕೆ ನೀಡುವಂತಹ ಸುಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಸಲು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.