ನವದೆಹಲಿ: ಕನಿಷ್ಠ ಶೇಕಡ 40ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ವ್ಯವಸ್ಥೆಯಲ್ಲಿ ತಾರತಮ್ಯಕ್ಕೆ ಗುರಿಯಾಗುವುದನ್ನು ಇನ್ನಿಲ್ಲವಾಗಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, 2024ರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ಅಂಗವಿಕಲ ವಿದ್ಯಾರ್ಥಿಯೊಬ್ಬನಿಗೆ ಸೀಟು ನೀಡಬೇಕು ಎಂದು ಹೇಳಿದೆ.
ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ–2016’ರಲ್ಲಿ ಸೂಚಿಸಿರುವ ಹೊಂದಾಣಿಕೆಗಳು ಸೇವಾಕಾರ್ಯದಂತೆ ಅಲ್ಲ; ಅವು ಮೂಲಭೂತ ಹಕ್ಕುಗಳ ಭಾಗ ಎಂದು ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಕಬೀರ್ ಪಹಾರಿಯಾ ಎನ್ನುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಈ ಮಾತು ಹೇಳಿದೆ. ಕಬೀರ್ ಅವರ ಐದು ಬೆರಳುಗಳು ಅರ್ಧ ಮಾತ್ರವೇ ಬೆಳವಣಿಗೆ ಕಂಡಿವೆ, ಈ ಕಾರಣಕ್ಕಾಗಿ ಅವರಿಗೆ ಎಂಬಿಬಿಎಸ್ ಪ್ರವೇಶ ನಿರಾಕರಿಸಲಾಗಿತ್ತು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ರಚಿಸಿದ ವೈದ್ಯಕೀಯ ಮಂಡಳಿಯು ಕಬೀರ್ ಅವರ ಸಾಮರ್ಥ್ಯವನ್ನು ಹೊಸದಾಗಿ ಪರೀಕ್ಷಿಸಬೇಕು ಎಂದು ಏಪ್ರಿಲ್ 2ರಂದು ಕೋರ್ಟ್ ನಿರ್ದೇಶನ ನೀಡಿತ್ತು. ಕಬೀರ್ ಅವರು ತಮ್ಮ ಬೆರಳುಗಳನ್ನು ಬಳಸಿಕೊಂಡು ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸಬಲ್ಲರು ಎಂದು ಮಂಡಳಿಯು ಹೇಳಿತ್ತು.
ಕಬೀರ್ ಅವರಿಗೆ ಎಂಬಿಬಿಎಸ್ ಸೀಟು ನಿರಾಕರಿಸಿರುವುದು ಅಕ್ರಮ, ಅದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರಿಗೆ ಸೀಟು ನಿರಾಕರಿಸಿದ ಕ್ರಮವು ವ್ಯವಸ್ಥಿತ ತಾರತಮ್ಯವನ್ನು, ಸಾಂಸ್ಥಿಕವಾಗಿರುವ ಪೂರ್ವಗ್ರಹಗಳನ್ನು ತೋರಿಸುತ್ತಿದೆ ಎಂದು ಕೂಡ ಕೋರ್ಟ್ ಹೇಳಿದೆ.
ಅಂಗವಿಕಲರು ಹಾಗೂ ಶೇಕಡ 40ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ವ್ಯವಸ್ಥೆಯಿಂದ ಹೊರಗೆ ಇರಿಸುವ ಬದಲು, ಒಂದಿಷ್ಟು ಹೊಂದಾಣಿಕೆಗಳನ್ನು ಮಾಡಿಕೊಂಡು ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಸಂವಿಧಾನ ಹೇಳುತ್ತದೆ ಎಂಬುದಾಗಿ ಪೀಠವು ಮೇ 2ರಂದು ನೀಡಿರುವ ತೀರ್ಪಿನಲ್ಲಿ ಹೇಳಿದೆ. ತೀರ್ಪಿನ ಪ್ರತಿಯನ್ನು ಸೋಮವಾರ ಪ್ರಕಟಿಸಲಾಗಿದೆ.
ಅರ್ಜಿದಾರರ ಪರವಾಗಿ ವಕೀಲರಾದ ರಾಹುಲ್ ಬಜಾಜ್ ಮತ್ತು ಅಮರ್ ಜೈನ್ ವಾದ ಮಂಡಿಸಿದ್ದರು. ಇವರಿಬ್ಬರು ಕೂಡ ಶೇಕಡ 40ರಷ್ಟು ಅಂಗವೈಕಲ್ಯ ಹೊಂದಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.