ಸುಪ್ರೀಂ ಕೋರ್ಟ್
ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಪ್ರಕರಣಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಅತ್ಯಂತ ಆದ್ಯತೆಯ ಆಧಾರದ ಮೇಲೆ ಪೊಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಅಡಿಯ ಪ್ರಕರಣಗಳಿಗಾಗಿ ವಿಶೇಷ ನ್ಯಾಯಾಲಯಗಳ ಸಂಖ್ಯೆಯ ಕೊರತೆಯಿಂದಾಗಿ, ಕಾನೂನಿನಡಿಯಲ್ಲಿ ಕಡ್ಡಾಯವಾಗಿ ನಿಗದಿಪಡಿಸಿರುವ ಸಮಯದ ಒಳಗೆ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಿ.ಬಿ. ವರಾಳೆ ಅವರ ಪೀಠ ಹೇಳಿದೆ.
‘ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಕ್ಸೊ ಪ್ರಕರಣಗಳ ತನಿಖೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಪೊಕ್ಸೊ ಪ್ರಕರಣಗಳ ವಿಚಾರಣೆ ನಡೆಸಲು ಆದ್ಯತೆಯ ಆಧಾರದ ಮೇಲೆ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ನಿರೀಕ್ಷಿಸಲಾಗಿದೆ’ ಎಂದು ಪೀಠ ಹೇಳಿದೆ.
ನಿಗದಿತ ಸಮಯದೊಳಗೆ ವಿಚಾರಣೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಕಾನೂನಿನಲ್ಲಿ ನಿಗದಿಪಡಿಸಿದ ಕಡ್ಡಾಯ ಅವಧಿಯೊಳಗೆ ಆರೋಪಪಟ್ಟಿಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕೇಂದ್ರದ ನಿಧಿಯಿಂದ ಪೊಕ್ಸೊ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ನಿರ್ದೇಶನಗಳನ್ನು ಬಹುತೇಕ ರಾಜ್ಯಗಳು ಪಾಲಿಸಿವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇರುವುದರಿಂದ ಹೆಚ್ಚಿನ ಪೊಕ್ಸೊ ನ್ಯಾಯಾಲಯಗಳು ಅಗತ್ಯವಿದೆ ಎಂದಿದೆ.
ಪೊಕ್ಸೊ ನ್ಯಾಯಾಲಯಗಳ ಸ್ಥಿತಿಗತಿಯ ಕುರಿತು ರಾಜ್ಯವಾರು ವಿವರಗಳನ್ನು ಸಲ್ಲಿಸುವಂತೆ ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ವಿ ಗಿರಿ ಹಾಗೂ ಹಿರಿಯ ವಕೀಲೆ ಉತ್ತರಾ ಬಬ್ಬರ್ ಅವರಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.
ಮಕ್ಕಳ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕುರಿತ ವರದಿಗಳ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.
ಪೊಕ್ಸೊ ಕಾಯ್ದೆಯಡಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 300ಕ್ಕಿಂತ ಹೆಚ್ಚು ಬಾಕಿ ಇರುವ ಜಿಲ್ಲೆಗಳಲ್ಲಿ ಎರಡು ನಿಯೋಜಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.