ADVERTISEMENT

ಬೈಲಾ ಉಲ್ಲಂಘನೆ: ನೋಯ್ಡಾದಲ್ಲಿನ 40 ಅಂತಸ್ತುಗಳ ಅವಳಿ ಕಟ್ಟಡ ನೆಲಸಮಕ್ಕೆ ಆದೇಶ

ಪಿಟಿಐ
Published 31 ಆಗಸ್ಟ್ 2021, 9:24 IST
Last Updated 31 ಆಗಸ್ಟ್ 2021, 9:24 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕಟ್ಟಡಗಳಿಗೆ ಸಂಬಂಧಿಸಿದ ಬೈಲಾಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ನೋಯ್ಡಾದಲ್ಲಿ ಸೂಪರ್‌ಟೆಕ್‌ ಲಿಮಿಟೆಡ್‌ ನಿರ್ಮಿಸಿರುವ 40 ಅಂತಸ್ತುಗಳ ಅವಳಿ ಕಟ್ಟಡಗಳನ್ನು ಮೂರು ತಿಂಗಳ ಒಳಗಾಗಿ ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ಈ ಕಟ್ಟಡಗಳಲ್ಲಿ ಮನೆಗಳನ್ನು ಖರೀದಿಸಿರುವವರಿಗೆ, ಮನೆ ಬುಕಿಂಗ್‌ ವೇಳೆ ಅವರು ನೀಡಿದ್ದ ಮೊತ್ತವನ್ನು ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಅವಳಿ ಕಟ್ಟಡಗಳ ನಿರ್ಮಾಣದಿಂದಾಗಿ ಕಿರುಕುಳ ಅನುಭವಿಸಿದ್ದಕ್ಕಾಗಿ ರೆಸಿಡೆಂಟ್ಸ್ ವೆಲ್‌ಫೇರ್‌ ಅಸೋಸಿಯೇಶನ್‌ಗೆ ₹ 2 ಕೋಟಿ ಪಾವತಿಸಬೇಕು ಎಂದೂ ಸುಪ್ರೀಂಕೋರ್ಟ್‌ ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ, ‘ಅವಳಿ ಕಟ್ಟಡಗಳನ್ನು ನೆಲಸಮಗೊಳಿಸುವಂತೆ 2014ರ ಏಪ್ರಿಲ್‌ 11ರಂದು ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತೀರ್ಪು ಸರಿಯಾಗಿದೆ. ಈ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೇಳಿದೆ..

ADVERTISEMENT

ಸೂಕ್ತ ಏಜೆನ್ಸಿ ಹಾಗೂ ನೋಯ್ಡಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆಯಬೇಕು. ಈ ಕಾರ್ಯಕ್ಕೆ ತಗುಲುವ ಎಲ್ಲ ವೆಚ್ಚವನ್ನು ಸೂಪರ್‌ಟೆಕ್‌ ಕಂಪನಿಯೇ ಭರಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

‘ದೇಶದ ಮಹಾನಗರಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಂಥ ನಿರ್ಮಾಣಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸಹ ಶಾಮೀಲಾಗಿರುವುದು ಕಂಡುಬಂದಿದೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ’ ಎಂದೂ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.