ADVERTISEMENT

ದೆಹಲಿ ಸರ್ಕಾರದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಹೋರಾಟಗಾರ್ತಿ ದೇವಾಂಗನಾ ಕಲಿತಾ ಅವರಿಗೆ ಜಾಮೀನು ಪ್ರಶ್ನಿಸಿ ಅರ್ಜಿ

ಪಿಟಿಐ
Published 28 ಅಕ್ಟೋಬರ್ 2020, 15:53 IST
Last Updated 28 ಅಕ್ಟೋಬರ್ 2020, 15:53 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪಿಂಜ್ರಾ ಟೋಡ್‌ ಹೋರಾಟಗಾರ್ತಿ ದೇವಾಂಗನಾ ಕಲಿತಾ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.

‘ಪ್ರಭಾವಶಾಲಿ ವ್ಯಕ್ತಿ ಎಂಬುವುದನ್ನು ಆಧಾರವಾಗಿಟ್ಟುಕೊಂಡು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರಿದ್ದ ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ದೆಹಲಿ ಸರ್ಕಾರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರು ‘ಕಲಿತಾ ಅವರು ಪ್ರಭಾವಶಾಲಿ ವ್ಯಕ್ತಿ. ಈ ಪ್ರಕರಣದಲ್ಲಿ ಪೊಲೀಸರು ಸಾಕ್ಷಿದಾರರಾಗಿದ್ದಾರೆ ಎಂದು ಹೈಕೋರ್ಟ್‌ ಹೇಳಿದೆ. ಕಲಿತಾ ಇವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದರು. ಈ ವಾದವನ್ನು ಪೀಠ ತಿರಸ್ಕರಿಸಿತು. ಜೊತೆಗೆ ದೆಹಲಿ ಹೈಕೋರ್ಟ್‌ ನಿರ್ಧಾರದ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

ADVERTISEMENT

‘ಕಲಿತಾ ಅವರು ಸಮುದಾಯವೊಂದರ ಮಹಿಳೆಯನ್ನು ಗಲಭೆಗೆ ಪ್ರೇರೇಪಿಸಿದರು ಹಾಗೂ ದ್ವೇಷ ಭಾಷಣ ಮಾಡಿದರು ಎನ್ನುವುದನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆ. ಕಲಿತಾ ಅವರು ತಮ್ಮ ಮೂಲಭೂತ ಹಕ್ಕಿನಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ’ ಎಂದು ಉಲ್ಲೇಖಿಸಿದ್ದ ದೆಹಲಿ ಹೈಕೋರ್ಟ್‌ ಸೆ.1ರಂದು ಅವರಿಗೆ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.