ADVERTISEMENT

ಹಣ ಅಕ್ರಮ ವರ್ಗಾವಣೆ: ರಾಣಾ ಅಯ್ಯುಬ್‌ ಅರ್ಜಿ ರದ್ದು ಮಾಡಿದ ಸುಪ್ರೀಂ ಕೋರ್ಟ್

ಪಿಟಿಐ
Published 7 ಫೆಬ್ರುವರಿ 2023, 11:01 IST
Last Updated 7 ಫೆಬ್ರುವರಿ 2023, 11:01 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಸಂಬಂಧ ಗಾಜಿಯಾಬಾದ್‌ ನ್ಯಾಯಾಲಯವು ನೀಡಿರುವ ಸಮನ್ಸ್‌ ಪ್ರಶ್ನಿಸಿ, ಪತ್ರಕರ್ತೆ ರಾಣಾ ಅಯ್ಯುಬ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದು ಮಾಡಿದೆ.

‘ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಜಾರಿ ನಿರ್ದೇಶನಾಲಾಯವು ಆರೋಪಿಸಿದೆ. ಅವರು ಸಲ್ಲಿಸಿರುವ ನನ್ನ ಖಾತೆಯು ಮುಂಬೈನಲ್ಲಿದೆ. ಜೊತೆಗೆ ನಾನು ಮುಂಬೈನಲ್ಲೇ ನೆಲೆಸಿದ್ದೇನೆ. ಆದ್ದರಿಂದ ಪ್ರಕರಣವು ಗಾಜಿಯಾಬಾದ್‌ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ರಾಣಾ ಅವರು ವಾದಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಮಣಿಯನ್‌ ಮತ್ತು ಜೆ.ಬಿ. ಪಾರ್ದಿವಾಲಾ ಅವರಿದ್ದ ಪೀಠವು, ‘ನ್ಯಾಯಾಲಯದ ವ್ಯಾಪ್ತಿಯ ವಿಚಾರದ ಬಗ್ಗೆ ಗಾಜಿಯಾಬಾದ್‌ ನ್ಯಾಯಾಲಯದಲ್ಲಿಯೇ ಪ್ರಶ್ನಿಸಿ’ ಎಂದಿತು.

ADVERTISEMENT

‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 3ರ ಪ್ರಕಾರ, ಯಾವ ಸ್ಥಳದಲ್ಲಿ ಅಕ್ರಮ ನಡೆದಿದೆ ಎನ್ನುವುದಕ್ಕಿಂತ ಯಾವ ಸ್ಥಳದಲ್ಲಿ ಸಾಕ್ಷ್ಯ ದೊರಕಿದೆ ಎನ್ನುವುದರ ಮೇಲೆ ಎಲ್ಲಿ ಪ್ರಕರಣ ದಾಖಲಾಗಬೇಕು ಎಂದು ನಿರ್ಧಾರವಾಗುತ್ತದೆ. ಆದ್ದರಿಂದ ನೀವು ಬೇಕಾದರೆ ಗಾಜಿಯಾಬಾದ್‌ ನ್ಯಾಯಾಲಯದಲ್ಲಿಯೇ, ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ಪ್ರಶ್ನೆ ಮಾಡಿ. ನಾವು ಈ ಅರ್ಜಿಯನ್ನು ರದ್ದು ಮಾಡುತ್ತಿದ್ದೇವೆ’ ಎಂದಿತು.

ಅಯ್ಯುಬ್‌ ಅವರ ಅರ್ಜಿಯ ಸಂಬಂಧದ ತೀರ್ಪನ್ನು ಜ.31ರಂದು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.