ADVERTISEMENT

ದೇಶದ್ರೋಹ ಪ್ರಕರಣ: ಪತ್ರಕರ್ತ ವಿನೋದ್ ದುವಾಗೆ ಕಾನೂನಾತ್ಮಕ ರಕ್ಷಣೆ ಮುಂದುವರಿಕೆ

ಮುಂದಿನ ಆದೇಶದವರೆಗೆ ರಕ್ಷಣೆಗೆ ಸುಪ್ರೀಂ ಕೋರ್ಟ್ ಸೂಚನೆ, ಜುಲೈ 27ಕ್ಕೆ ವಿಚಾರಣೆ ಮುಂದೂಡಿಕೆ

ಪಿಟಿಐ
Published 20 ಜುಲೈ 2020, 11:36 IST
Last Updated 20 ಜುಲೈ 2020, 11:36 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿರುವ ಹಿರಿಯ ಪತ್ರಕರ್ತ ವಿನೋದ್ ದುವಾ ಅವರಿಗೆ ತನ್ನ ಮುಂದಿನ ಆದೇಶದವರೆಗೆ ಕಾನೂನಾತ್ಮಕ ರಕ್ಷಣೆ ಮುಂದುವರಿಸಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಅಷ್ಟೇ ಅಲ್ಲ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರು ಕೇಳಿದ ಯಾವುದೇ ಪೂರಕ ಪ್ರಶ್ನೆಗಳಿಗೆ ದುವಾ ಅವರು ಉತ್ತರಿಸುವ ಅಗತ್ಯವಿಲ್ಲ’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ವಿನೀತ್ ಸರಣ್ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ.

ADVERTISEMENT

ಜುಲೈ 7ರಂದು ಸುಪ್ರೀಂ ಕೋರ್ಟ್ ದುವಾ ಅವರಿಗೆ ಕಾನೂನಾತ್ಮಕ ರಕ್ಷಣೆ ಮುಂದುವರಿಸಲು ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ನಡೆಸಿದ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಲು ಸೂಚಿಸಲಾಗಿತ್ತು.

ವಿನೋದ್ ದುವಾ ಅವರ ವಿರುದ್ಧ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕುಮಾರ್‌ಸೇನ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಶ್ಯಾಮ್ ಮೇ 6ರಂದು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆ ಕೈಗೊಳ್ಳಬೇಕೆಂದೂ ಶ್ಯಾಮ್ ಒತ್ತಾಯಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮತ ಪಡೆಯಲು ಸಾವು ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ದುವಾ ಅವರು ತಮ್ಮ ಯುಟ್ಯೂಬ್ ಚಾನೆಲ್‌ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆಂದು ಶ್ಯಾಮ್ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.