ADVERTISEMENT

ಕೊಲೆ ಪ್ರಕರಣ: ಮಾಜಿ ಡಿಜಿಪಿಗೆ ನಿರೀಕ್ಷಣಾ ಜಾಮೀನು ನೀಡಿದ ‘ಸುಪ್ರೀಂ’

ಪಿಟಿಐ
Published 3 ಡಿಸೆಂಬರ್ 2020, 9:31 IST
Last Updated 3 ಡಿಸೆಂಬರ್ 2020, 9:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 1991ರಲ್ಲಿ ನಡೆದ ಜೂನಿಯರ್ ಎಂಜಿನಿಯರ್‌ ನಾಪತ್ತೆ ಮತ್ತು ಕೊಲೆ ಪ್ರಕರಣದಲ್ಲಿ ಪಂಜಾಬ್‌ನ ಮಾಜಿ ಡಿಜಿಪಿ ಸುಮೇದ್ ಸಿಂಗ್‌ ಸೈನಿ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಸೈನಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸೈನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಎರ್‌.ಸಿಂಗ್ ಅವರನ್ನೊಳಗೊಂಡ ಪೀಠ ಸೈನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ‌

ಸುಮೇದ್ ಸಿಂಗ್ ಸೈನಿ, ಚಂಡಿಗಡ ಕೈಗಾರಿಕಾ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ಜೂನಿಯರ್ ಎಂಜಿನಿಯರ್‌ ಆಗಿದ್ದ ಬಲ್ವಂತ್ ಸಿಂಗ್ ಮುಲ್ತಾನಿ ಅವರ ನಾಪತ್ತೆ ಮತ್ತು ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದರು.

ADVERTISEMENT

ಸೈನಿಗೆ ಜಾಮೀನು ನೀಡುವುದರಿಂದ ಕೊಲೆ ಪ್ರಕರಣದ ತನಿಖೆ ನಡೆಸಲು ತೊಂದರೆಯಾಗುತ್ತದೆ. ಹಾಗಾಗಿ ಅವರನ್ನು ಬಂಧಿಸಲು ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಹೇಳಿತ್ತು.

‘ಪ್ರಕರಣ ನಡೆದು 29 ವರ್ಷಗಳಾಗಿವೆ. ಸೈನಿ ಬಂಧನಕ್ಕೆ ಈಗ ಇಷ್ಟು ಆತುರ ತೋರುತ್ತಿರುವುದಾದರೂ ಏಕೆ’ ಎಂದು ಸುಪ್ರೀಂ ಕೋರ್ಟ್‌ ಪಂಜಾಬ್‌ ಸರ್ಕಾರವನ್ನು ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.