ADVERTISEMENT

ದೇಶದ್ರೋಹ ಆರೋಪದಡಿ ಪ್ರಕರಣ: ನಾಲ್ಕು ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌

ಒಂದೇ ಎಫ್‌ಐಆರ್‌ ಕೋರಿ ಶರ್ಜೀಲ್‌ ಇಮಾಮ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 20:00 IST
Last Updated 26 ಮೇ 2020, 20:00 IST
   

ನವದೆಹಲಿ: ದೇಶದ್ರೋಹ ಆರೋಪದಡಿ ತನ್ನ ವಿರುದ್ಧ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳ ಬದಲು, ಒಂದೇ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ಸಿಎಎ ವಿರೋಧಿ ಹೋರಾಟಗಾರ ಹಾಗೂ ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ಸಲ್ಲಿಸಿರುವ ಮನವಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನಾಲ್ಕು ರಾಜ್ಯಗಳಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕಭೂಷಣ್‌, ಸಂಜಯಕಿಶನ್‌ ಕೌಲ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ,ಉತ್ತರ ಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಮಣಿಪುರ ರಾಜ್ಯಗಳಿಗೆ ನೋಟಿಸ್‌ ನೀಡಿತು.

ರಿಪಬ್ಲಿಕ್‌ ಚಾನೆಲ್‌ನ ಅರ್ನಾಬ್‌ ಗೋಸ್ವಾಮಿ ವಿರುದ್ಧ ವಿವಿಧೆಡೆ ದಾಖಲಿಸಿದ್ದ ಎಫ್‌ಐಆರ್‌ಗಳನ್ನು ರದ್ದುಪಡಿಸಲಾಗಿದೆ. ಇದೇ ಮಾದರಿಯಲ್ಲಿ ಶರ್ಜೀಲ್‌ ವಿರುದ್ಧವೂ ಒಂದೇ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು. ಒಂದೇ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಶರ್ಜೀಲ್‌ ಪರ ವಕೀಲ ಸಿದ್ಧಾರ್ದ್‌ ದವೆ ಕೋರಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ,ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.