ADVERTISEMENT

ಎಸ್‌ಸಿ, ಎಸ್‌ಟಿ ಕಾಯ್ದೆ ತಿದ್ದುಪಡಿ: ತಡೆಯಾಜ್ಞೆಗೆ ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 30 ಜನವರಿ 2019, 11:11 IST
Last Updated 30 ಜನವರಿ 2019, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೆ (ಎಸ್‌ಸಿ, ಎಸ್‌ಟಿ ಕಾಯ್ದೆ) ಇತ್ತೀಚೆಗೆ ತಂದಿರುವ ತಿದ್ದುಪಡಿಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ಮತ್ತೊಮ್ಮೆ ನಿರಾಕರಿಸಿದೆ.

‘ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2018ರ ಮಾರ್ಚ್20ರಂದು ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೇಂದ್ರ ಸಲ್ಲಿಸಿರುವ ಅರ್ಜಿ ಹಾಗೂ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 19 ರಂದು ನಡೆಸಲಾಗುವುದು’ ಎಂದು ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ಹೇಳಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ತಕ್ಷಣವೇ ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪನ್ನು ರದ್ದು ಮಾಡುವುದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ADVERTISEMENT

ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ ನಿರೀಕ್ಷಣಾ ಜಾಮೀನಿಗೆ ಅವಕಾಶ ಇರದಂತೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ ಸಿಂಗ್‌ ಅವರು, ಇದಕ್ಕೆ ಕೂಡಲೇ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಎಸ್‌ಸಿ, ಎಸ್‌ಟಿ ಕಾಯ್ದೆಯ ತಿದ್ದುಪಡಿಗೆ ತಡೆ ನೀಡಲು ಇದೇ 25 ರಂದೂ ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌, ಕೇಂದ್ರದ ಮರುಪರಿಶೀಲನಾ ಅರ್ಜಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸೂಕ್ತ ಪೀಠವು ನಡೆಸಲಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.