ADVERTISEMENT

ಪಿಜಿ ನೀಟ್‌ನಲ್ಲಿ 1,450 ಸೀಟು ಖಾಲಿ: ಸುಪ್ರೀಂ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 15:42 IST
Last Updated 8 ಜೂನ್ 2022, 15:42 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ:2021ರ ಪಿಜಿ ‘ನೀಟ್‌’ನಲ್ಲಿ 1,450ಕ್ಕೂ ಹೆಚ್ಚು ಸೀಟುಗಳನ್ನು ಖಾಲಿ ಬಿಟ್ಟಿರುವುದಕ್ಕೆ ಬುಧವಾರ ಮೆಡಿಕಲ್‌ ಕೌನ್ಸೆಲಿಂಗ್ ಕಮಿಟಿಯನ್ನು (ಎಂಸಿಸಿ) ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇದು ಆಕಾಂಕ್ಷಿಗಳನ್ನು ತೊಂದರೆಗೆ ಸಿಲುಕಿಸುವುದಲ್ಲದೆ, ವೈದ್ಯರ ಕೊರತೆಗೂ ಕಾರಣವಾಗುತ್ತದೆ ಎಂದು ಹೇಳಿದೆ.

ಖಾಲಿ ಉಳಿದಿರುವ ಒಟ್ಟು ಸೀಟುಗಳು ಮತ್ತು ಅವುಗಳು ಅಭ್ಯರ್ಥಿಗಳಿಂದ ಏಕೆ ಭರ್ತಿಯಾಗಿಲ್ಲ ಎಂಬ ಕಾರಣಗಳನ್ನು ಸೂಚಿಸಿ, ಪ್ರಮಾಣ ಪತ್ರ ಸಲ್ಲಿಸಲು ಕೇಂದ್ರ ಮತ್ತು ಎಂಸಿಸಿಗೆ ಕೋರ್ಟ್ 24 ಗಂಟೆಗಳ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಅನಿರುದ್ಧ ಬೋಸ್ ಅವರ ರಜಾಕಾಲದ ಪೀಠ,ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ADVERTISEMENT

ವಿಚಾರಣೆ ವೇಳೆ ಪೀಠ, ‘ಒಂದೇ ಒಂದು ಸೀಟು ಖಾಲಿ ಇದ್ದರೂ ಅದು ಭರ್ತಿಯಾಗುವಂತೆ ನೋಡಿಕೊಳ್ಳುವುದು ಎಂಸಿಸಿ ಕರ್ತವ್ಯ. ಪ್ರತಿ ಸುತ್ತಿನ ಕೌನ್ಸೆಲಿಂಗ್ ಬಳಿಕವೂ ಇದೇ ಸಮಸ್ಯೆ. ವೈದ್ಯರ ಅವಶ್ಯಕತೆ ಇರುವಾಗ ಸೀಟುಗಳನ್ನು ಖಾಲಿ ಬಿಡುವುದರಿಂದ ಏನು ಸಿಗುತ್ತದೆ? ಇದು ಆಕಾಂಕ್ಷಿಗಳಿಗೆ ಸಮಸ್ಯೆ ಸೃಷ್ಟಿಸುವುದು ಮಾತ್ರವಲ್ಲ, ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ’ ಎಂದು ಚಾಟಿ ಬೀಸಿದೆ.

‘ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಒತ್ತಡದ ಮಟ್ಟ ತಿಳಿದಿದೆಯೇ? ಕೌನ್ಸೆಲಿಂಗ್ ಮಧ್ಯೆ ಸೀಟುಗಳನ್ನು ಏಕೆ ಸೇರಿಸುತ್ತಿದ್ದೀರಿ. ಈ ಸಂಬಂಧ ಈಗಾಗಲೇ ನ್ಯಾಯಾಲಯದ ತೀರ್ಪು ಬಂದಿದೆ. ಸೀಟುಗಳ ಸಂಖ್ಯೆ ಮತ್ತು ಎಷ್ಟು ಪ್ರವೇಶಗಳನ್ನು ನೀಡಲಾಗುತ್ತದೆ ಎಂಬುದಕ್ಕೆ ಕಟ್-ಆಫ್ ದಿನಾಂಕ ಇರಬೇಕು’ ಎಂದು ಪೀಠ ಹೇಳಿದೆ.

ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಗುರುವಾರ ಕೋರ್ಟ್‌ನಲ್ಲಿ ಹಾಜರಿರುವಂತೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.