ADVERTISEMENT

ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ: ವರದಿ ನೀಡದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತರಾಟೆ

ಪಿಟಿಐ
Published 10 ಜನವರಿ 2022, 11:18 IST
Last Updated 10 ಜನವರಿ 2022, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ನೀಡುತ್ತಿರುವ ಕುರಿತಂತೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಮೂಲಭೂತ ಹಕ್ಕುಗಳು ಎಲ್ಲ ವೃತ್ತಿಯವರಿಗೂ ಖಾತರಿಯಾಗಿವೆ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ದೇಶದಲ್ಲಿ ಈಗ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಜೀವರಕ್ಷಕ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಈ ವಿಷಯವನ್ನು ಹಗುರವಾಗಿ ಪರಿಗಣಿಸಿದೆ ಎಂದು ಹೇಳಿತು.

‘ನಿಮಗೆ ಎಷ್ಟು ಬಾರಿ ಹೇಳಬೇಕು? ನಾವು ನಿಮಗೆ ಕಟ್ಟುಪಾಡುಗಳನ್ನು ವಿಧಿಸುತ್ತೇವೆ. ಕಳೆದ ಬಾರಿ ನೀಡಿದ್ದ ಆದೇಶವನ್ನು ನೋಡಿದ್ದೀರಾ? ಏಕೆ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ? ಇತರ ಎಲ್ಲ ರಾಜ್ಯಗಳು ಪ್ರಮಾಣಪತ್ರ ಸಲ್ಲಿಸುತ್ತಿರುವಾಗ, ಪಶ್ಚಿಮ ಬಂಗಾಳ ಏಕೆ ಆ ಕೆಲಸ ಮಾಡುತ್ತಿಲ್ಲ’ ಎಂದೂ ಪೀಠ ಪ್ರಶ್ನಿಸಿತು.

ADVERTISEMENT

ನಾವು ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂಬುದರ ಅರ್ಥ ನೀವು ಹಗುರವಾಗಿ ಪರಿಗಣಿಸಬಹುದು ಎಂದಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಉದ್ದೇಶ, ಇದು ಅಸ್ತಿತ್ವದ ಪ್ರಶ್ನೆ ಮತ್ತು ಪಡಿತರ ವಿತರಣೆ ಆಗುತ್ತಿಲ್ಲ ಎಂಬುದೇ ಆಗಿದೆ ಎಂದು ಹೇಳಿತು.

ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ರಾಜ್ಯ ಸರ್ಕಾರ ‘ಖಾದ್ಯ ಸಾಥಿ‘ ಯೋಜನೆ ಪ್ರಕಟಿಸಿದ್ದು, ಅಗತ್ಯವುಳ್ಳವರಿಗೆ ಪಡಿತರ ವಿತರಿಸುತ್ತಿದೆ ಎಂದು ತಿಳಿಸಿದರು. ಆದರೆ, ಇದು ಪೀಠಕ್ಕೆ ಸಮಾಧಾನ ತರಲಿಲ್ಲ. ಎರಡು ವಾರದಲ್ಲಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ಎಲ್ಲ ವೃತ್ತಿಯವರಿಗೂ ಮೂಲಭೂತ ಹಕ್ಕು ಇರುತ್ತದೆ. ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ, ಮತದಾರರ ಗುರುತು ಚೀಟಿ, ಆಧಾರ್‌ ಕಾರ್ಡ್ ವಿತರಿಸುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ಕೇಂದ್ರ, ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿತು.

ಕೋವಿಡ್ ವೇಳೆ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆ ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು, ಕಳೆದ ವರ್ಷ ಸೆಪ್ಟೆಂಬರ್ 29ರಂದು ಈ ಬಗ್ಗೆ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.