ADVERTISEMENT

ಅಬಕಾರಿ ನೀತಿ ಹಗರಣ: ಕವಿತಾಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 14:29 IST
Last Updated 27 ಮಾರ್ಚ್ 2023, 14:29 IST
ಕೆ. ಕವಿತಾ 
ಕೆ. ಕವಿತಾ    

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ನೀಡಿರುವ ಸಮನ್ಸ್‌ಗೆ ಸಂಬಂಧಿಸಿದಂತೆ ಬಿಆರ್‌ಎಸ್ ಶಾಸಕಿ ಕೆ. ಕವಿತಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಆದರೆ, ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರ ನೇತೃತ್ವದ ನ್ಯಾಯಪೀಠವು, ತನಿಖಾ ಸಂಸ್ಥೆಯ ಕಚೇರಿಯಲ್ಲಿ ಮಹಿಳೆಯನ್ನು ವಿಚಾರಣೆಗೆ ಕರೆಯಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಪರಿಶೀಲಿಸಲು ಒಪ್ಪಿಕೊಂಡಿತು.

ಕವಿತಾ ಅವರ ಮನವಿ ಅರ್ಜಿಯನ್ನು ಬಾಕಿ ಉಳಿದಿರುವ ಅರ್ಜಿದಾರರಾದ ನಳಿನಿ ಚಿದಂಬರಂ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಚಿರಾ ಬ್ಯಾನರ್ಜಿ ಅವರ ಅರ್ಜಿಗಳೊಂದಿಗೆ ಸೇರಿಸಿ ವಿಚಾರಣೆ ಮಾಡಲು ನ್ಯಾಯಾಲಯವು ಆದೇಶಿಸಿದ್ದು, ಮೂರು ವಾರಗಳ ಬಳಿಕ ಅರ್ಜಿಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

ADVERTISEMENT

ಕವಿತಾ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಕವಿತಾ ಅವರಿಗೆ ದೆಹಲಿಯಲ್ಲಿ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಲಾಗಿದ್ದು, ಅವರನ್ನು ಇಲ್ಲಿ ಅಥವಾ ಅವರ ನಿವಾಸದಲ್ಲಿ ಪ್ರಶ್ನಿಸಲಾಗುವುದೇ ಎಂಬ ಪ್ರಶ್ನೆಗೆ ಸಂಬಂಧಿಸಿದೆ ಎಂದು ವಾದಿಸಿದರು.

ಕವಿತಾ ಹಾಗೂ ಇತರರ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆಗೊಳಪಡಿಸುವುದನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿರೋಧಿಸಿದ್ದು, ಬ್ಯಾನರ್ಜಿ ಅವರ ಪ್ರಕರಣವು ಭಿನ್ನವಾಗಿದೆ ಎಂದರು.

ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಕವಿತಾ ಅವರ ಮನವಿಯು ಫಲಪ್ರದದಾಯಕವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕವಿತಾ ಅವರನ್ನು ಸಿಬಿಐ ಹಾಗೂ ಇ.ಡಿ ವಿಚಾರಣೆಗೊಳಪಡಿಸಿತ್ತು. ಈ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.