ADVERTISEMENT

‘ನೀಟ್‌’ ಮುಂದೂಡಲು ಸುಪ್ರೀಂ ಕೋರ್ಟ್‌ ನಕಾರ

ಸೆಪ್ಟೆಂಬರ್‌ 12ರಂದು ಪರೀಕ್ಷೆ

ಪಿಟಿಐ
Published 6 ಸೆಪ್ಟೆಂಬರ್ 2021, 10:33 IST
Last Updated 6 ಸೆಪ್ಟೆಂಬರ್ 2021, 10:33 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸೆಪ್ಟೆಂಬರ್‌ 12ರಂದು ನಿಗದಿಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್‌–ಯುಜಿ) ಮುಂದೂಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ಪರೀಕ್ಷೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯ ಬಯಸುವುದಿಲ್ಲ ಮತ್ತು ಅದನ್ನು ಮರುನಿಗದಿಗೊಳಿಸುವುದು ಸಹ ನ್ಯಾಯಸಮ್ಮತವಲ್ಲ ಎಂದು ಹೇಳಿದೆ.

ಸೆಪ್ಟೆಂಬರ್‌ 12ರಂದು ಹಲವು ಪರೀಕ್ಷೆಗಳು ನಿಗದಿಯಾಗಿವೆ. ಹೀಗಾಗಿ, ‘ನೀಟ್‌’ ಮುಂದೂಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್‌ವಿಲ್ಕರ್, ಹೃಷಿಕೇಷ್‌ ರಾಯ್‌ ಮತ್ತು ಸಿ.ಟಿ. ರವಿಕುಮಾರ್‌ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ADVERTISEMENT

ಹಲವು ಪರೀಕ್ಷೆಗಳು ಅದೇ ದಿನ ಇದ್ದರೆ ಆದ್ಯತೆ ಮೇರೆಗೆ ವಿದ್ಯಾರ್ಥಿಗಳು ಒಂದನ್ನು ಆಯ್ಕೆ ಮಾಡಿಕೊಳ್ಳಲಿ. ಪರೀಕ್ಷಾ ದಿನಾಂಕಗಳಿಗೆ ಸಂಬಂಧಿಸಿದಂತೆ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಅರ್ಜಿದಾರರ ವಾದವು ಶೇಕಡ 99ರಷ್ಟು ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ. ಕೇವಲ ಶೇಕಡ 1ರಷ್ಟು ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ. ಆದರೆ, ಪರೀಕ್ಷಾ ದಿನಾಂಕಗಳನ್ನು ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರ ಮನವಿ ಸಲ್ಲಿಸಬಹುದು ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.