ADVERTISEMENT

ರಾಜೀನಾಮೆ ಹಿಂದೆಯೇ ಚುನಾವಣೆಗೆ ಸ್ಪರ್ಧೆ:ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಪಿಟಿಐ
Published 5 ಏಪ್ರಿಲ್ 2024, 14:21 IST
Last Updated 5 ಏಪ್ರಿಲ್ 2024, 14:21 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸರ್ಕಾರಿ ನೌಕರರು ನಿವೃತ್ತಿ ಅಥವಾ ಹುದ್ದೆಗೆ ರಾಜೀನಾಮೆಯನ್ನು ನೀಡಿದ ತಕ್ಷಣವೇ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಚುನಾವಣಾ ಆಯೋಗದ ಶಿಫಾರಸು ಜಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿತು.

ಅರ್ಜಿ ಹಿಂಪಡೆಯಬೇಕು ಹಾಗೂ ಸಂಬಂಧಿಸಿದ ಪ್ರಾಧಿಕಾರಕ್ಕೇ ಈ ಬಗ್ಗೆ ಮನವಿ ಸಲ್ಲಿಸಬಹುದು ಎಂದೂ ಕೋರ್ಟ್ ಮಾಜಿ ಸಂಸದ ಅರ್ಜಿದಾರ ಜಿ.ವಿ. ಹರ್ಷ ಅವರಿಗೆ ಶುಕ್ರವಾರ ಸೂಚಿಸಿತು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಸಂದೀಪ್‌ ಮೆಹ್ತಾ ಅವರಿದ್ದ ಪೀಠ ಈ ಸೂಚನೆ ನೀಡಿತು. ಅರ್ಜಿದಾರರು 2004ರಿಂದ 2014ರವರೆಗೆ ಲೋಕಸಭೆಯ ಸದಸ್ಯರಾಗಿದ್ದರು.

ADVERTISEMENT

ಸರ್ಕಾರಿ ನೌಕರರು ಸೇವಾ ನಿವೃತ್ತಿ ಅಥವಾ ಹುದ್ದೆಗೆ ರಾಜೀನಾಮೆ ಹಿಂದೆಯೇ ರಾಜಕೀಯ ಪಕ್ಷಗಳ ಟಿಕೆಟ್‌ ಪಡೆದು ಶಾಸನಸಭೆಗೆ ಸ್ಪಂದಿಸದಂತೆ ನಿರ್ಬಂಧಿಸಬೇಕು ಹಾಗೂ ಸ್ಪರ್ಧೆಗೆ ಕಾಲಮಿತಿ ನಿಗದಿಸಬೇಕು ಎಂದು ಚುನಾವಣಾ ಆಯೋಗ 2012ರಲ್ಲಿ ಶಿಫಾರಸು ಮಾಡಿತ್ತು. ನಾಗರಿಕ ಸೇವಾ ಸುಧಾರಣಾ ಸಮಿತಿ 2004ರ ಜುಲೈನಲ್ಲಿ ನೀಡಿದ್ದ ವರದಿಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. 

ಈ ಶಿಫಾರಸು ಜಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ವಕೀಲ ಶ್ರಾವಣ್‌ ಕುಮಾರ್ ಕರಣಂ ಅವರ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿತ್ತು.

‘ಈ ವರದಿ 2012ಕ್ಕೆ ಸಂಬಂಧಿಸಿದ್ದು, ಅರ್ಜಿ ಹಿಂಪಡೆಯುವಿರೋ, ವಾದ ಮುಂದುವರಿಸುವಿರೋ’ ಎಂಬ ಪೀಠದ ಪ್ರಶ್ನೆಗೆ, ‘ಅರ್ಜಿ ಹಿಂಪಡೆಯುತ್ತೇವೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.