ADVERTISEMENT

ಚುನಾವಣಾ ಲಾಭಕ್ಕಾಗಿ ಅಧಿಕಾರಿಗಳ ಬಳಕೆ ವಿರೋಧಿಸಿದ್ದ ಪಿಐಎಲ್‌ ವಜಾ

ಸರ್ಕಾರದ ಸಾಧನೆಗಳಿಗೆ ಪ್ರಚಾರಕ್ಕೆ ಸಿಬ್ಬಂದಿ ಬಳಕೆ ಆರೋಪ

ಪಿಟಿಐ
Published 28 ನವೆಂಬರ್ 2023, 12:44 IST
Last Updated 28 ನವೆಂಬರ್ 2023, 12:44 IST
<div class="paragraphs"><p>  ಸುಪ್ರೀಂ ಕೋರ್ಟ್ </p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸರ್ಕಾರದ ಸಾಧನೆಗಳಿಗೆ ಪ್ರಚಾರ ನೀಡುವುದಕ್ಕೆ ಸರ್ಕಾರಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ಗುರುವಾರ ತಿರಸ್ಕರಿಸಿದೆ. ಚುನಾವಣೆಯಲ್ಲಿ ಲಾಭ ಪಡೆಯುವ ದೃಷ್ಟಿಯಿಂದ ಸರ್ಕಾರ ಇಂಥ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.  

ಸರ್ಕಾರದ ಸಾಧನೆಗಳನ್ನು ಎತ್ತಿತೋರಿಸುವಂತೆ ಸರ್ಕಾರಿ ನೌಕರರಿಗೆ ಸೂಚಿಸಿ ರಕ್ಷಣಾ ವ್ಯವಹಾರಗಳ ಮಹಾಲೇಖಪಾಲರು (ಸಿಜಿಡಿಎ) ಹೊರಡಿಸಿದ್ದ ಒಂದು ಪತ್ರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಿ ಇಎಎಸ್‌ ಶರ್ಮ ಮತ್ತು ಜಗದೀಶ್‌ ಎಸ್‌. ಛೋಕರ್‌ ಎಂಬುವವರು ಪಿಐಎಲ್‌ ಸಲ್ಲಿಸಿದ್ದರು. 

ADVERTISEMENT

ಈ ಪಿಐಎಲ್‌ನ ವಿಚಾರಣೆಯನ್ನು ನಡೆಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ನ್ಯಾಯಪೀಠವು ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್‌ ಅವರಿಗೆ ಹೇಳಿತು. ಹೈಕೋರ್ಟ್‌ನಲ್ಲಿ ಈ ಪಿಐಎಲ್‌ಅನ್ನು ಸಲ್ಲಿಸಲು ಅಡ್ಡಿಯಿಲ್ಲ ಎಂದು ಕೂಡಾ ತಿಳಿಸಿತು.

ರಕ್ಷಣಾ ಸಚಿವಾಲಯದ ಉತ್ತಮ ಕಾರ್ಯಕ್ರಮಗಳನ್ನು ಬಿಂಬಿಸುವಂಥ ಸೆಲ್ಫಿ ಪಾಯಿಂಟ್‌ಗಳನ್ನು ಕೂಡಲೇ ಸ್ಥಾಪಿಸುವಂತೆ ಸಿಜಿಡಿಎ ತನ್ನ ಸಿಬ್ಬಂದಿಗೆ ಅಕ್ಟೋಬರ್‌ 9ರಂದು ಪತ್ರ ರವಾನಿಸಿತ್ತು. ಕೇಂದ್ರ ಸರ್ಕಾರ ಒಂಬತ್ತು ವರ್ಷಗಳ ಸಾಧನೆಗಳನ್ನು ಸಾರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳನ್ನು ಬಳಸಿಕೊಳ್ಳುವ ಕುರಿತು ಡಿಒಪಿಟಿ ಅಕ್ಟೋಬರ್‌ 17ರಂದು ಸುತ್ತೋಲೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.