ADVERTISEMENT

ನೀಟ್: ಮರುಮೌಲ್ಯಮಾಪನ ಕೋರಿದ್ದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಭೌತವಿಜ್ಞಾನ: ಪ್ರಶ್ನೆಪತ್ರಿಕೆಯ ಹಿಂದಿ ಆವೃತ್ತಿಯಲ್ಲಿ ದೋಷಗಳಿದ್ದ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 13:40 IST
Last Updated 30 ನವೆಂಬರ್ 2021, 13:40 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಭೌತವಿಜ್ಞಾನ ಪ್ರಶ್ನೆಪತ್ರಿಕೆಯ ಹಿಂದಿ ಆವೃತ್ತಿಯಲ್ಲಿ ಹಲವು ದೋಷಗಳಿದ್ದವು ಎಂದು ಆರೋಪಿಸಿದ್ದ ಕೆಲ ಅಭ್ಯರ್ಥಿಗಳು, ತಮ್ಮ ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎ.ಎಸ್‌.ಬೋಪಣ್ಣ ಹಾಗೂ ವಿಕ್ರಮ್‌ ನಾಥ್‌ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ವಾಜಿದಾ ತಬಸ್ಸುಮ್‌ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.

ಐಐಟಿಗಳ ಪ್ರಾಧ್ಯಾಪಕರು, ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯದ (ಎನ್‌ಪಿಎಲ್‌) ತಜ್ಞರನ್ನು ಒಳಗೊಂಡ ಸಮಿತಿಯು ಹಿಂದಿಯಲ್ಲಿದ್ದ ಭೌತವಿಜ್ಞಾನದ ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ದೋಷಗಳು ಇಲ್ಲ ಎಂಬುದಾಗಿ ವರದಿ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ಒದಗಿಸಿತ್ತು. ಕೇಂದ್ರ ಸರ್ಕಾರ ಸಲ್ಲಿಸಿರುವ ಈ ಮಾಹಿತಿಯನ್ನು ಪರಿಗಣಿಸಿದ ನ್ಯಾಯಪೀಠ, ಮರುಮೌಲ್ಯಮಾಪನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು.

ADVERTISEMENT

ನೀಟ್‌ನ ಭೌತವಿಜ್ಞಾನ ಪ್ರಶ್ನೆಪತ್ರಿಕೆಯ ಹಿಂದಿ ಆವೃತ್ತಿಯಲ್ಲಿ ದೋಷಗಳಿವೆ ಎಂಬ ಆರೋಪಗಳ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂಕೋರ್ಟ್‌ ನ. 25ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.